ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ₹50, ಪೆಟ್ರೋಲ್ ದರ ಲೀಟರ್‌ಗೆ ₹1.64 ಏರಿಕೆ

Last Updated 22 ಮಾರ್ಚ್ 2022, 19:06 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ಮನೆಗಳಲ್ಲಿ ಬಳಸುವ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆಯನ್ನು ಮಂಗಳವಾರ ಹೆಚ್ಚಿಸಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯು ದೆಹಲಿಯಲ್ಲಿ ಲೀಟರಿಗೆ ತಲಾ 80 ಪೈಸೆ ಏರಿಕೆ ಆಗಿದೆ. 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹ 50 ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಲೀಟರ್‌ಗೆ ತಲಾ 84 ಪೈಸೆಯಷ್ಟು ಆಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾದಾಗಿನಿಂದ ತೈಲೋತ್ಪನ್ನಗಳ ದರ ಬದಲಾವಣೆ ಮಾಡಿರಲಿಲ್ಲ. ಈಗಿನ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಪ್ರಮಾಣವು ಮತ್ತಷ್ಟು ಜಾಸ್ತಿ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 101.42, ಡೀಸೆಲ್ ದರವು ಲೀಟರಿಗೆ ₹ 85.80 ಆಗಿದೆ. ರಾಜ್ಯದಿಂದ ರಾಜ್ಯಕ್ಕೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮೌಲ್ಯವರ್ಧಿತ ತೆರಿಗೆ ಹಾಗೂ ಸಾಗಣೆ ವೆಚ್ಚ ಆಧರಿಸಿ ತೈಲ ಬೆಲೆಯಲ್ಲಿ ಬದಲಾವಣೆ ಇರುತ್ತದೆ.

ಎಲ್‌ಪಿಜಿ ಸಿಲಿಂಡರ್ ಬೆಲೆಯು 2021ರ ಜುಲೈನಿಂದ ಅಕ್ಟೋಬರ್ 6ರ ನಡುವಿನ ಅವಧಿಯಲ್ಲಿ ₹ 90 ಹೆಚ್ಚಳವಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ.

ಈಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ಗೆ ಬಹುತೇಕ ನಗರಗಳ ಗ್ರಾಹಕರಿಗೆ ಸಬ್ಸಿಡಿ ನೀಡುತ್ತಿಲ್ಲ. 2014ರಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರುಕಟ್ಟೆ ದರವು ₹ 1,241ಕ್ಕೆ ಏರಿಕೆ ಆಗಿತ್ತು. ಆದರೆ, ಆಗ ಸಬ್ಸಿಡಿ ಸಿಲಿಂಡರ್ ಹೊಂದಿರುವವರಿಗೆ ಪ್ರತಿ ಸಿಲಿಂಡರ್‌ಗೆ ₹ 600ರಷ್ಟು ಸಬ್ಸಿಡಿ ಸಿಗುತ್ತಿತ್ತು. ಈಗ ಪ್ರತಿ ಸಿಲಿಂಡರ್‌ಗೆ ₹ 952 (ಬೆಂಗಳೂರಿನ ದರ) ಪಾವತಿಸಬೇಕಿದೆ. ಸಬ್ಸಿಡಿ ಇಲ್ಲವಾಗಿರುವ ಕಾರಣ ಇದು ಎಲ್‌ಪಿಜಿ ಸಿಲಿಂಡರ್‌ಗೆ ಪಾವತಿಸಬೇಕಿರುವ ಇದುವರೆಗಿನ ಗರಿಷ್ಠ ದರ.

ಎಲ್‌ಪಿಜಿ ಸಬ್ಸಿಡಿ ನೀಡುವುದನ್ನು 2020ರ ಮೇ ತಿಂಗಳಿನಿಂದ ನಿಲ್ಲಿಸಲಾಗಿದೆ. ದೂರದ ಪ್ರದೇಶಗಳ ಎಲ್‌ಪಿಜಿ ಗ್ರಾಹಕರಿಗೆ, ಹೆಚ್ಚಿನ ಸರಕು ಸಾಗಣೆ ವೆಚ್ಚಕ್ಕೆ ಪರಿಹಾರ ರೂಪದಲ್ಲಿ ಸಣ್ಣ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡಲಾಗುತ್ತಿದೆ ಎನ್ನಲಾಗಿದೆ.

5 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 349ಕ್ಕೆ, 10 ಕೆ.ಜಿ. ಸಿಲಿಂಡರ್ ಬೆಲೆ ₹ 669ಕ್ಕೆ ತಲುಪಿದೆ. 19 ಕೆ.ಜಿ. ತೂಕದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯು ಈಗ ₹ 2,003.50 ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ನಿಗದಿ ಮಾಡುವ ವ್ಯವಸ್ಥೆಯು 2017ರ ಜೂನ್‌ನಲ್ಲಿ ಜಾರಿಗೆ ಬಂತು. ಆದರೆ, 2021ರ ನವೆಂಬರ್ 4ರಿಂದ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ.

ರಷ್ಯಾ–ಉಕ್ರೇನ್ ಕದನ ಆರಂಭವಾದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 13 ವರ್ಷಗಳ ಗರಿಷ್ಠ ಮಟ್ಟವಾದ 140 ಡಾಲರ್‌ಗೆ ತಲುಪಿತ್ತು. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಮಂಗಳವಾರ 113 ಡಾಲರ್‌ ಆಗಿದೆ. ಕಚ್ಚಾ ತೈಲ ಬೆಲೆಯು ಈ ವರ್ಷದಲ್ಲಿ ಶೇ 60ಕ್ಕಿಂತ ಹೆಚ್ಚಾಗಿರುವುದು ಹಾಗೂ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ದೇಶದ ಹಣಕಾಸು ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು ಎಂಬ ಆತಂಕ ಎದುರಾಗಿದೆ.

ನಷ್ಟ ಸರಿದೂಗಿಸಲು ಬೆಲೆ ಏರಿಕೆ
ನವದೆಹಲಿ:
ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸದೆ ಇದ್ದುದರಿಂದ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು ಎಂದಾದರೆ ಈ ಎರಡು ತೈಲೋತ್ಪನ್ನಗಳ ಬೆಲೆಯನ್ನು ಲೀಟರಿಗೆ ₹ 25 ಹೆಚ್ಚಿಸಬೇಕಾಗುತ್ತದೆ ಎಂದು ಉದ್ಯಮದ ಮೂಲಗಳು ಹೇಳಿವೆ. ಆದರೆ ತೈಲ ಮಾರಾಟ ಕಂಪನಿಗಳು ಬೆಲೆ ಏರಿಕೆಯನ್ನು ಒಂದೇ ಬಾರಿಗೆ ಮಾಡುವುದಿಲ್ಲ, ದಿನಕ್ಕೆ ₹ 1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಆಗಬಹುದು ಎನ್ನಲಾಗಿದೆ.

**
ಬಿಜೆಪಿ ನೇತೃತ್ವದ ಸರ್ಕಾರದಿಂದ ಜನರಿಗೆ ಇನ್ನೊಂದು ಕೊಡುಗೆ ಬಂದಿದೆ. ಚುನಾವಣೆ ಮುಗಿದಿದೆ. ಹಣದುಬ್ಬರ ಶುರುವಾಗಿದೆ -ಅಖಿಲೇಶ್ ಯಾದವ್, ಎಸ್‌ಪಿ ಅಧ್ಯಕ್ಷ

**

ಭಾರತದಲ್ಲಿ ದ್ವೇಷ ಬಿತ್ತುವ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಇದೆ. ಬಡವರ ಹಸಿವಿಗೆ ತೆರಿಗೆ ಇದೆ.
-ಸಾಕೇತ ಗೋಖಲೆ, ಟಿಎಂಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT