ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹266 ಹೆಚ್ಚಳ; ತೈಲ ಬೆಲೆ ಮತ್ತೆ ಏರಿಕೆ

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರ ಇಂದಿನಿಂದ ₹266 ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ₹1734ಕ್ಕೆ ಮಾರಾಟವಾಗುತ್ತಿದ್ದ ವಾಣಿಜ್ಯ ಉದ್ದೇಶಿತ ಬಳಕೆಯ 19 ಕೆ.ಜಿ. ಸಿಲಿಂಡರ್ ಬೆಲೆಯು ₹2000.50ಕ್ಕೆ ಏರಿಕೆಯಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆಯಾಗಿಲ್ಲ.
ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಲಾ 35 ಪೈಸೆ ಹೆಚ್ಚಳ ದಾಖಲಾಗಿದೆ. ನಿರಂತರ ಆರನೇ ದಿನವೂ ತೈಲ ದರ ಏರಿಕೆಯಾಗಿದ್ದು, ಗ್ರಾಹಕರು ಹೈರಾಣಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹೆಚ್ಚಳವೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ದರದ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹113.56 ಮತ್ತು ಡೀಸೆಲ್‌ಗೆ ₹104.50 ಇದೆ; ಹೈದರಾಬಾದ್‌ನಲ್ಲಿ ಪೆಟ್ರೋಲ್ ₹114.12 ಮತ್ತು ಡೀಸೆಲ್ ದರ ₹107.40 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ₹109.69 ಮತ್ತು ಡೀಸೆಲ್‌ಗೆ ₹98.42 ಇದೆ. ಮುಂಬೈನಲ್ಲಿ ಪೆಟ್ರೋಲ್ ₹115.50 ಮತ್ತು ಡೀಸೆಲ್ ₹106.62ಕ್ಕೆ ಮಾರಾಟವಾಗುತ್ತಿದೆ. ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಕ್ರಮವಾಗಿ ₹110.15 ಮತ್ತು ₹106.35, ಡೀಸೆಲ್ ದರ ಕ್ರಮವಾಗಿ ₹101.56 ಮತ್ತು ₹102.59 ನಿಗದಿಯಾಗಿದೆ.
ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹120 ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ ₹122.32 ಮತ್ತು ಡೀಸೆಲ್ ₹113.21 ತಲುಪಿದೆ. ತೈಲ ಸಾಗಣೆ ದರ ಮತ್ತು ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರ ವ್ಯತ್ಯಾಸ ದಾಖಲಾಗಿದೆ.
ಸೆಪ್ಟೆಂಬರ್ 28ರಿಂದ ಈವರೆಗೂ ಪೆಟ್ರೋಲ್ ದರ 26 ಬಾರಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ₹8.15ರಷ್ಟು ಹೆಚ್ಚಳವಾಗಿದೆ. ಡೀಸೆಲ್ ದರ ಸೆಪ್ಟೆಂಬರ್ 24ರಿಂದ 29 ಬಾರಿ ಹೆಚ್ಚಳವಾಗಿದ್ದು, ಲೀಟರ್‌ಗೆ ₹9.45ರಷ್ಟು ಏರಿಕೆಯಾಗಿದೆ. ಅದಕ್ಕೂ ಮುನ್ನ ಮೇ 4ರಿಂದ ಜುಲೈ 17ರ ವರೆಗೂ ಪೆಟ್ರೋಲ್ ₹11.44 ಹಾಗೂ ಡೀಸೆಲ್ ₹9.14ರಷ್ಟು ಹೆಚ್ಚಳ ಕಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.