ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಎಸ್‌ಎಂಇ’ ಉದ್ಯಮ ಸಲಹೆ: ಇ-ಕಿರಾಣ ಸ್ಟೋರ್ ಯೋಜನೆಯಲ್ಲಿ ಪಾಲ್ಗೊಳ್ಳುವುದು ಹೇಗೆ?

Last Updated 19 ಆಗಸ್ಟ್ 2020, 21:54 IST
ಅಕ್ಷರ ಗಾತ್ರ

ರಾಧಾ, ಚಿತ್ರದುರ್ಗ
ಪ್ರಶ್ನೆ: ಅಂದಾಜು 10 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ವಾಸಿಸುತ್ತಿರುವ 24 ವರ್ಷ ವಯಸ್ಸಿನ ಮಹಿಳೆ ನಾನು. ಇತ್ತೀಚೆಗಷ್ಟೆ ನಾನು ಬಿ.ಇಡಿ ಮುಗಿಸಿದ್ದು, ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ತರಬೇತಿ ಕೇಂದ್ರ ಸ್ಥಾಪಿಸುವ ಆಲೋಚನೆ ಹೊಂದಿದ್ದೇನೆ. ಈ ದಿಸೆಯಲ್ಲಿ ನಾನು ಹೇಗೆ ಮುಂದುವರೆಯಲಿ? ಸರ್ಕಾರದಿಂದ ನನಗೆ ಏನಾದರೂ ನೆರವು ದೊರೆಯುತ್ತದೆಯೇ?

ಉತ್ತರ: ಮೊದಲನೆಯದಾಗಿ ನೀವು ಕೋಚಿಂಗ್ ಕೇಂದ್ರ ಪ್ರಾರಂಭ ಮಾಡುವುದರ ಕುರಿತು ದೃಢ ತೀರ್ಮಾನ ತೆಗೆದುಕೊಳ್ಳಿ ಹಾಗೂ ಅದಕ್ಕೆ ತಗಲುವ ಅಂದಾಜು ವೆಚ್ಚ ತಿಳಿದುಕೊಳ್ಳಿ. ನೀವು ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು. ಸೇವಾ ಕ್ಷೇತ್ರಗಳಿಗೆ ನೀಡಲಾಗುವ ₹ 10 ಲಕ್ಷದವರೆಗಿನ ಸಾಲಕ್ಕೆ ‘ಸಾಲ ಭದ್ರತಾ ನಿಧಿ’ ಅಡಿಯಲ್ಲಿ ಭದ್ರತೆ ನೀಡಲಾಗುತ್ತದೆ.

ಮಹಾದೇವಪ್ಪ, ಬೀದರ್
ಪ್ರಶ್ನೆ: ನನ್ನ ಊರಿನಲ್ಲಿ ಮನೆ ಬಾಗಿಲಿಗೆ ಸರಕುಗಳನ್ನು ತಲುಪಿಸುವ ಉದ್ಯಮ ಪ್ರಾರಂಭಿಸಲು ಆಸಕ್ತಿ ಹೊಂದಿದ್ದೇನೆ. ಈ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳೇನು? ಈ ಉದ್ದೇಶಕ್ಕಾಗಿ ನಾನು ವಿದ್ಯುತ್ ಚಾಲಿತ ವಾಹನ ಖರೀದಿಸಿದಲ್ಲಿ ನನಗೆ ಯಾವ ರೀತಿಯ ನೆರವು ದೊರೆಯುತ್ತದೆ?

ಉತ್ತರ: ಭಾರತದಲ್ಲಿ ಸರಕು ಸಾಗಣೆ ಉದ್ಯಮ ಹೆಚ್ಚಿನ ಆದಾಯ ತರುವ ಕ್ಷೇತ್ರ. ಸರಕಿನ ಒಟ್ಟು ಮೌಲ್ಯದ ಶೇಕಡ 14ರಷ್ಟನ್ನು ಸಾಗಣೆಗೆ ಖರ್ಚು ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಭಾರತದಲ್ಲಿ ಸರಕು ಸಾಗಣೆ ಉದ್ಯಮವು ಸಣ್ಣ ಮತ್ತು ದೊಡ್ಡ ಉದ್ಯಮಶೀಲರಿಗೆ ವಿಪುಲ ಅವಕಾಶಗಳನ್ನು ನೀಡುತ್ತದೆ. ವಾಹನ ಖರೀದಿ ಮಾಡಲು ನೀವು ಬ್ಯಾಂಕಿನಿಂದ ಸಾಲ ಪಡೆಯಬಹುದು. ಒಂದೇ ವಾಹನ ಖರೀದಿ ಮಾಡಲು ಇಚ್ಛಿಸಿದಲ್ಲಿ ಸಾಮಾನ್ಯ ಸಾಲದ ಅರ್ಜಿ ಸಲ್ಲಿಸಿದರೆ ಸಾಕು. ಹಲವಾರು ವಾಹನ ತಯಾರಕರು ಸರಕು ಸಾಗಣೆ ಉದ್ಯಮದ ಪ್ರವರ್ತಕರ ರೂಪದಲ್ಲಿ ಸ್ಪರ್ಧಾತ್ಮಕ ಬಡ್ಡಿ ದರಕ್ಕೆ ಆರ್ಥಿಕ ನೆರವು ನೀಡುತ್ತಾರೆ. ವಿದ್ಯುತ್ ಚಾಲಿತ ವಾಹನಗಳಿಗೆ ತಯಾರಕರು ಅನ್ವಯವಾಗುವ ಸಬ್ಸಿಡಿಗಳನ್ನು ನೀಡುತ್ತಾರೆ.

ವಿನಯ್, ತುಮಕೂರು
ಪ್ರಶ್ನೆ: ಗುಬ್ಬಿ ತಾಲ್ಲೂಕಿನಲ್ಲಿ ನಾನು ಸಣ್ಣ ಕಿರಾಣಿ ಅಂಗಡಿ ನಡೆಸುತ್ತೇನೆ. ಇತ್ತೀಚೆಗೆ ನಾನು ಕೇಂದ್ರ ಸರ್ಕಾರದ ಇ-ಕಿರಾಣ ಸ್ಟೋರ್ ಯೋಜನೆ ಕುರಿತು ಓದಿದೆ. ಈ ಯೋಜನೆಯಲ್ಲಿ ನಾನು ಹೇಗೆ ಪಾಲ್ಗೊಳ್ಳಬಹುದು? ಪ್ರಸ್ತುತ ಪರಿಸ್ಥಿತಿಯಲ್ಲಿ ನನ್ನ ವ್ಯವಹಾರಕ್ಕೆ ಯಾವ ಯೋಜನೆಗಳಡಿ ನೆರವು ದೊರೆಯುತ್ತದೆ?

ಉತ್ತರ: ಸರ್ಕಾರವು ಗ್ರಾಮ ಮಟ್ಟದಲ್ಲಿ ಆನ್‌ಲೈನ್ ರಿಟೇಲ್ ಉದ್ಯಮ ಪ್ರಾರಂಭಿಸಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಗ್ರಾಹಕರಿಂದ ಆರ್ಡರ್‌ ಪಡೆದು ಮನೆ ಬಾಗಿಲಿಗೆ ಅವಶ್ಯಕ ವಸ್ತುಗಳನ್ನುಈಗಾಗಲೇ ಸರಬರಾಜು ಮಾಡುತ್ತಿರುವ ಅಂಗಡಿಗಳು ಈ ಯೋಜನೆಯಲ್ಲಿ ಭಾಗವಹಿಸಬಹುದು. ಸರ್ಕಾರದ ಡಿಜಿಟಲ್ ಸೇವಾ ತಾಣ – ಕಾಮನ್ ಸರ್ವೀಸ್ ಸೆಂಟರ್ ಸ್ಕೀಂ (ಸಿಎಸ್‌ಸಿ) – ಈ ಯೋಜನೆಗೆ ನೆರವು ನೀಡುತ್ತಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಹತ್ತಿರದ ಸಿಎಸ್‌ಸಿಯನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT