ಸೋಮವಾರ, ಜುಲೈ 26, 2021
26 °C
ಚೀನಾದ ಸ್ಮಾರ್ಟ್‌ಫೋನ್‌ ಕಂಪನಿಗಳ ಜೊತೆ ಸ್ಪರ್ಧೆಗೆ ಇಳಿಯಲಿದೆಯೇ ಜಿಯೊ?

ಭಾರತದಲ್ಲೇ ಅಭಿವೃದ್ಧಿಪಡಿಸಿದ 5ಜಿ ವ್ಯವಸ್ಥೆ

ಎಎಫ್‌ಪಿ/‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಿಯೊ ಕಂಪನಿಯು ಪರಿಪೂರ್ಣ 5ಜಿ ದೂರಸಂಪರ್ಕ ವ್ಯವಸ್ಥೆಯನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿದೆ. ಇದು ವಿಶ್ವದರ್ಜೆಯ 5ಜಿ ಸೇವೆಗಳನ್ನು ಆರಂಭಿಸಲು ಅನುವು ಮಾಡಿಕೊಡಲಿದೆ. ಈ ವ್ಯವಸ್ಥೆ ದೇಶದಲ್ಲಿ ಯಶಸ್ಸು ಕಂಡ ನಂತರ, ಇದನ್ನು ಜಾಗತಿಕ ಮಟ್ಟದಲ್ಲಿ ಇತರ ಕಂಪನಿಗಳಿಗೆ ರಫ್ತು ಮಾಡುವ ಸಾಮರ್ಥ್ಯ ಕೂಡ ಜಿಯೊಕ್ಕೆ ದಕ್ಕಲಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದರು.

‘ಮುಂದಿನ ಮೂರು ವರ್ಷಗಳಲ್ಲಿ 50 ಕೋಟಿಗಿಂತ ಹೆಚ್ಚಿನ ಮೊಬೈಲ್‌ ಬಳಕೆದಾರರನ್ನು, 5 ಕೋಟಿ ಕುಟುಂಬಗಳು ಹಾಗೂ ವಾಣಿಜ್ಯ ಘಟಕಗಳನ್ನು ತಲುಪುವ ಸಾಮರ್ಥ್ಯವನ್ನು ಜಿಯೊ ಹೊಂದಲಿದೆ’ ಎಂದು ಅವರು ಆರ್‌ಐಎಲ್ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.

‘ಭಾರತವು 5ಜಿ ಯುಗದ ಬಾಗಿಲಿಗೆ ಬಂದು ನಿಂತಿದೆ. ಈಗ 2ಜಿ ಫೀಚರ್‌ ಫೋನ್‌ ಬಳಸುತ್ತಿರುವ 35 ಕೋಟಿ ಭಾರತೀಯರು ಕೈಗೆಟಕುವ ದರದ ಸ್ಮಾರ್ಟ್‌ಫೋನ್‌ ಹೊಂದುವ ಪ್ರಕ್ರಿಯೆಗೆ ನಾವು ವೇಗ ನೀಡಬೇಕು. ಡಿಜಿಟಲ್ ಮತ್ತು ಡೇಟಾ ಕ್ರಾಂತಿಯಿಂದ ಅವರು ವಂಚಿತರಾಗಬಾರದು’ ಎಂದು ಹೇಳಿದರು.

‘ಅಗ್ಗದ ದರದ ಡೇಟಾ ಮತ್ತು ಸ್ಮಾರ್ಟ್‌ಫೋನ್‌ ಮೂಲಕ ಲಕ್ಷಾಂತರ ಜನ ಆನ್‌ಲೈನ್‌ ಜಗತ್ತಿಗೆ ಬಂದರು. ಇದರಲ್ಲಿ ಜಿಯೊ ಪಾತ್ರ ದೊಡ್ಡದಾಗಿತ್ತು. ನೂರು ಕೋಟಿ ಭಾರತೀಯರನ್ನು ಆನ್‌ಲೈನ್‌ ಜಗತ್ತಿಗೆ ಕರೆತರುವುದು ನಮ್ಮ ಗುರಿ’ ಎಂದು ಗೂಗಲ್‌ ಸಿಇಒ ಸುಂದರ್ ಪಿಚೈ ಅವರು ವಿಡಿಯೊ ಸಂದೇಶದ ಮೂಲಕ ತಿಳಿಸಿದರು.

ಭಾರತದ ಆನ್‌ಲೈನ್‌ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಅಮೆರಿಕದ ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ ಕಂಪನಿಗಳಿಗೆ ಸವಾಲೊಡ್ಡುವ ಉದ್ದೇಶವನ್ನು ಅಂಬಾನಿ ಹೊಂದಿದ್ದಾರೆ.

ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಅಂಬಾನಿ ಹೊಂದಿರುವುದರ ಪರಿಣಾಮವಾಗಿ, ಜಿಯೊ ಕಂಪನಿಯು ಚೀನಾದ ಮೊಬೈಲ್‌ ತಯಾರಕರ ಜತೆ ಸ್ಪರ್ಧೆಗೆ ಇಳಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅವರ ಗುರಿ ಚೀನಾದ ಸ್ಮಾರ್ಟ್‌ಫೋನ್‌ ತಯಾರಕರು. ಅವರಿಗೆ ಸ್ಪರ್ಧೆ ನೀಡುವ ಉದ್ದೇಶ ಜಿಯೊಕ್ಕೆ ಇದೆ’ ಎಂದು ವಿಶ್ಲೇಷಕ ಸತೀಶ್ ಮೀನಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು