ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳಕ್ಕೆ ಬಂತು ಬಂಪರ್ ಬೆಲೆ

ನವೆಂಬರ್ ತಿಂಗಳಲ್ಲಿ ಕ್ವಿಂಟಲ್‌ಗೆ ₹2,300 ದಾಟಿದ ದರ
Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

ದಾವಣಗೆರೆ: ‘ಮೆಕ್ಕೆಜೋಳದ ಕಣಜ’ ಎಂದೇ ಹೆಸರಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಬರ ಆವರಿಸಿದ್ದರಿಂದ ಇಳುವರಿ ತೀವ್ರ ಕುಸಿದಿದ್ದು, ಮಾರುಕಟ್ಟೆಗೆ ಆವಕವೂ ಕಡಿಮೆಯಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ನಿತ್ಯ 10,000 ಕ್ವಿಂಟಲ್ ಆವಕವಾಗುತ್ತಿತ್ತು. ಆದರೆ, ಈ ವರ್ಷ ಅದು 4,000 ಕ್ವಿಂಟಲ್‌ಗೆ ಕುಸಿದಿದೆ.

ಕಳೆದ ವರ್ಷದ ನವೆಂಬರ್‌ ಅಂತ್ಯಕ್ಕೆ ಸ್ಥಳೀಯ ಎಪಿಎಂಸಿಯಲ್ಲಿ ಒಟ್ಟು 1.81 ಲಕ್ಷ ಕ್ವಿಂಟಲ್ ಆವಕವಾಗಿತ್ತು. ಈ ಬಾರಿ ನವೆಂಬರ್‌ 20ರವರೆಗೆ ಬರೀ 51,164 ಕ್ವಿಂಟಲ್ ಆವಕವಾಗಿದೆ. ಸೋಮವಾರ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 2,100ರಿಂದ ಗರಿಷ್ಠ ₹ 2,365ರವೆಗೂ ದರ ದೊರೆತಿದೆ. ಕಳೆದ ವರ್ಷದ ದರ ₹ 1,800ರಿಂದ ₹ 2,100ರವರೆಗೆ ಇತ್ತು.

1.25 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ: ಜಿಲ್ಲೆಯಲ್ಲಿ ಈ ಬಾರಿ 1.25 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಮಳೆ ಕೊರತೆಯಿಂದ ಶೇ 75ರಷ್ಟು ಬೆಳೆ ಹಾನಿಗೀಡಾಗಿದೆ ಎಂದು ರೈತ ಮುಖಂಡರು ಅಂದಾಜಿಸಿದ್ದಾರೆ. 

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಎಪಿಎಂಸಿಯಲ್ಲಿ 10.72 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಆವಕವಾಗಿತ್ತು. ಈ ಬಾರಿ ಅದರ ಪ್ರಮಾಣ ಶೇ 75ರಷ್ಟು ಕಡಿಮೆಯಾಗುವ ಸಂಭವ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಮಳೆ ಕೈಕೊಟ್ಟಿರುವುದರ ನಡುವೆಯೂ ಕೈಗೆ ಸಿಕ್ಕ ಮೆಕ್ಕೆಜೋಳದ ಗುಣಮಟ್ಟವೂ ಕಳಪೆ ಇದೆ. ಈಗ ಎಪಿಎಂಸಿಯಲ್ಲಿ ಶೇ 5ರಷ್ಟು ಮಾತ್ರ ಆವಕವಾಗುತ್ತಿದ್ದು, ಉಳಿದ ಶೇ 95ರಷ್ಟು ಮೆಕ್ಕೆಜೋಳವನ್ನು ರೈತರು ಖಾಸಗಿ ಖರೀದಿದಾರರಿಗೇ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿ ಪ್ರಾಂಗಣದಲ್ಲಿ  ಮೆಕ್ಕೆಜೋಳ ಒಣಗಿಸಲು ಸ್ಥಳಾವಕಾಶ ಇರುವುದರಿಂದ ಕೆಲವು ರೈತರು ಮಾತ್ರ ಇಲ್ಲಿಗೆ ಬರುತ್ತಾರೆ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ  ಜೆ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ ಈ ಬಾರಿ 4 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಎದುರಾಯಿತು. ವಿದ್ಯುತ್ ಅಭಾವದಿಂದಾಗಿ ಕೊಳವೆ ಬಾವಿ ನೀರು ಹರಿಸಲೂ ಆಗದ್ದರಿಂದ ಎಕರೆಗೆ 10ರಿಂದ 15 ಕ್ವಿಂಟಲ್ ಇಳುವರಿ ದೊರೆತಿದೆ. ಉತ್ತಮ ಮಳೆ ಸುರಿದಿದ್ದಲ್ಲಿ ಎಕರೆಗೆ 25ರಿಂದ 30 ಕ್ವಿಂಟಲ್ ಇಳುವರಿ ದೊರೆಯುತ್ತಿತ್ತು. ಬೆಳೆಹಾನಿಯಿಂದಾಗಿ ನಷ್ಟವಾಗಿದೆ’ ಎಂದು ದಾವಣಗೆರೆ ತಾಲ್ಲೂಕಿನ ಅಗಸನಕಟ್ಟೆಯ ರೈತ ರುದ್ರಪ್ಪ ಅಳಲು ತೋಡಿಕೊಂಡರು.

ದಾವಣಗೆರೆಯ ಎಪಿಎಂಸಿಯಲ್ಲಿ ರೈತರು ಮೆಕ್ಕೆಜೋಳವನ್ನು ಹಸನುಗೊಳಿಸುತ್ತಿರುವುದು ಸೋಮವಾರ ಕಂಡುಬಂತು

ದಾವಣಗೆರೆಯ ಎಪಿಎಂಸಿಯಲ್ಲಿ ರೈತರು ಮೆಕ್ಕೆಜೋಳವನ್ನು ಹಸನುಗೊಳಿಸುತ್ತಿರುವುದು ಸೋಮವಾರ ಕಂಡುಬಂತು

– ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಇಳುವರಿ ಕುಸಿದಿದೆ. ಖಾಸಗಿ ವ್ಯಾಪಾರಿಗಳು ರೈತರಿಂದ ಖರೀದಿಸಿ ಶೇಖರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

-ಕೆ.ಜಾವೇದ್ ಜಿಲ್ಲಾ ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ

ಸ್ಥಳೀಯವಾಗಿ ಹೆಚ್ಚು ಬಳಕೆ; ತಗ್ಗಿದ ರಫ್ತು

‘ಇಳುವರಿ ತಗ್ಗಿರುವುದರಿಂದ ಜಿಲ್ಲೆಯಲ್ಲಿ ಬೆಳೆದ ಮೆಕ್ಕೆಜೋಳ ಸ್ಥಳೀಯವಾಗಿಯೇ ಹೆಚ್ಚು ಬಳಕೆಯಾಗುತ್ತಿದೆ. ರಫ್ತು ಕಡಿಮೆಯಾಗಿದೆ. ಮಲೇಷ್ಯಾ ಥಾಯ್ಲೆಂಡ್‌ಗೆ ರಫ್ತಾಗುತ್ತಿತ್ತು. ತಮಿಳುನಾಡು ಮಹಾರಾಷ್ಟ್ರ ಆಂಧ್ರಪ್ರದೇಶ ಗುಜರಾತ್‌ ರಾಜ್ಯಗಳಿಗೂ ಹೋಗುತ್ತಿತ್ತು’ ಎಂದು ಜಿಲ್ಲಾ ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ ಕೆ.ಜಾವೇದ್ ತಿಳಿಸಿದರು. ಪಶು ಕೋಳಿ ಆಹಾರದ ಬೆಲೆ ಹೆಚ್ಚಳ ನಿರೀಕ್ಷೆ: ‘ಕೋಳಿ ಹಾಗೂ ಪಶು ಆಹಾರವಾಗಿ ಮೆಕ್ಕೆಜೋಳ ಬಳಕೆಯಾಗುತ್ತಿದೆ. ಮದ್ಯ ಹಾಗೂ ಔಷಧ ತಯಾರಿಕೆಗೂ ಮೆಕ್ಕೆಜೋಳ ಬಳಸಲಾಗುತ್ತದೆ. ಈ ಬಾರಿ ನಿರೀಕ್ಷಿತ ಪ್ರಮಾಣದ ಇಳುವರಿ ಇಲ್ಲದ್ದರಿಂದ ಸಹಜವಾಗಿಯೇ ಬೆಲೆ ಏರಿಕೆಯ ಸಾಧ್ಯತೆ ಇದೆ. ಸ್ಥಳೀಯ ಕಂಪನಿಗಳಿಗೆ ನಿತ್ಯ 5000ದಿಂದ 10000 ಟನ್ ಮೆಕ್ಕೆಜೋಳದ ಅಗತ್ಯವಿದೆ. ಚಿತ್ರದುರ್ಗ ಹಾಗೂ ಹಿರಿಯೂರುಗಳಲ್ಲಿನ ಪೌಲ್ಟ್ರಿ ಫಾರಂನವರೂ ಮೆಕ್ಕೆಜೋಳ ಖರೀದಿಸುತ್ತಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT