ಮಂಗಳವಾರ, ಜನವರಿ 21, 2020
29 °C

ಇಳಿಮುಖದತ್ತ ಈರುಳ್ಳಿ ದರ: ಪ್ರತಿ ಕೆ.ಜಿ.ಗೆ ₹40ರಿಂದ ₹50ರಂತೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸುಗ್ಗಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದಿದೆ. ನಿರಂತರ ಏರಿಕೆಯಾಗಿದ್ದ ಈರುಳ್ಳಿ ದರ ಈಗ ಕುಸಿತ ಕಂಡಿದೆ. ಇದು ಗ್ರಾಹಕರ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ. 

ಉಳ್ಳಾಗಡ್ಡಿ ಬೆಳೆಯುವ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆ ನೆಲ ಕಚ್ಚಿದ್ದರಿಂದ ಹಾಗೂ ದಾಸ್ತಾನು ಕೊರತೆಯಿಂದ ನಿತ್ಯವೂ ಈರುಳ್ಳಿ ದರ ಏರುತ್ತಲೇ ಸಾಗಿತ್ತು. 

ನವೆಂಬರ್‌ನಿಂದ ಈರುಳ್ಳಿ ದರದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು, ಪ್ರತಿ.ಕೆ.ಜಿಗೆ ₹ 200ರವರೆಗೂ ತಲುಪಿತ್ತು. ದಾಸ್ತಾನು ಕೊರತೆ ನೀಗಿಸಲು ವಿದೇಶಗಳಿಂದಲೂ ಈರುಳ್ಳಿ ಆಮದು ಮಾಡಿಕೊಳ್ಳಲಾಗಿತ್ತು. ಟರ್ಕಿ, ಈಜಿಪ್ಟ್‌ನಿಂದ ಆಮದು ಬಳಿಕವೂ ದರ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಆದರೂ ದರ ಪ್ರತಿ ಕೆ.ಜಿ.ಗೆ 100ರ ಆಜುಬಾಜಿನಲ್ಲೇ ಇತ್ತು. ಕರ್ನಾಟಕ, ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಕೆ.ಆರ್‌. ಮಾರುಕಟ್ಟೆಯಲ್ಲಿ ಸೋಮವಾರ ಈರುಳ್ಳಿ ಕೆ.ಜಿ.ಗೆ ₹40ರಿಂದ ₹50ಕ್ಕೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಈರುಳ್ಳಿ ₹60ರಿಂದ ₹80ರಂತೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ‍ಪ್ರತಿ ಕೆ.ಜಿ.ಗೆ ₹70ರಂತೆ ಮಾರಾಟವಾಯಿತು.

ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ ₹20ರಂತೆ ಮಾರಾಟವಾದರೆ, ಉತ್ತಮ ಗುಣಮಟ್ಟದ ಈರುಳ್ಳಿ ₹40ರಿಂದ ₹42 ಹಾಗೂ ಟರ್ಕಿ ಈರುಳ್ಳಿ ₹10ರಿಂದ ₹20ರಂತೆ ಮಾರಾಟವಾಯಿತು.

‘ಶನಿವಾರದವರೆಗೆ ಈರುಳ್ಳಿ ದರ ಹೆಚ್ಚಿತ್ತು. ಎರಡು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಿದೆ. ಸೋಮವಾರ 215 ಟ್ರಕ್‌ಗಳಲ್ಲಿ ಈರುಳ್ಳಿ ಬಂದಿದೆ. ಪ್ರತಿ ಕ್ವಿಂಟಲ್‌ಗೆ  ₹40 ಸಾವಿರದಿಂದ ₹42 ಸಾವಿರದಂತೆ ಮಾರಾಟ ಆಗುತ್ತಿದೆ’ ಎಂದು ಬೆಂಗಳೂರು ಈರುಳ್ಳಿ ಹಾಗೂ ಆಲೂಗಡ್ಡೆ ವರ್ತಕರ ಸಂಘದ ಕಾರ್ಯ ದರ್ಶಿ ಉದಯಶಂಕರ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು