ಶುಕ್ರವಾರ, ಅಕ್ಟೋಬರ್ 22, 2021
30 °C

ಫೇಸ್‌ಬುಕ್‌ ಸೇವೆಯಲ್ಲಿ ವ್ಯತ್ಯಯ; ಜುಕರ್‌ಬರ್ಗ್‌ಗೆ 44,728 ಕೋಟಿ ನಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಫೇಸ್‌ಬುಕ್‌ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಗಳ ಸೇವೆಯಲ್ಲಿ ಸೋಮವಾರ ಉಂಟಾದ ವ್ಯತ್ಯಯದಿಂದಾಗಿ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಸುಮಾರು 6 ಬಿಲಿಯನ್‌ ಡಾಲರ್‌ (ಅಂದಾಜು 44,728 ಕೋಟಿ) ನಷ್ಟ ಉಂಟಾಗಿದೆ. ಇದರಿಂದಾಗಿ ಅವರು ವಿಶ್ವದ ಸಿರಿವಂತರ ಪಟ್ಟಿಯಲ್ಲಿಯೂ ಕೆಲವು ಸ್ಥಾನ‌ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮ ಕ್ಷೇತ್ರದ ದಿಗ್ಗಜ ಕಂಪೆನಿಯಾಗಿರುವ ಫೇಸ್‌ಬುಕ್‌ನ ಷೇರು ಮೌಲ್ಯ ಸೋಮವಾರ ಒಂದೇದಿನ ಶೇ 4.9 ರಷ್ಟು ಕುಸಿತ ಕಂಡಿದೆ. ಮಾತ್ರವಲ್ಲದೆ ಸೆಪ್ಟೆಂಬರ್‌ ಮಧ್ಯದಿಂದೀಚೆಗೆ ಬರೋಬ್ಬರಿ ಶೇ 15 ರಷ್ಟು ಇಳಿಕೆಯಾಗಿದೆ.

ಫೇಸ್‌ಬುಕ್‌ ಕಂಪೆನಿಯ ಮಾಲೀಕ ಜುಕರ್‌ಬರ್ಗ್‌ ಅವರ ಸಂಪತ್ತು ಕಳೆದ ಕೆಲವು ವಾರಗಳಿಂದ 140 ಶತಕೋಟಿ ಡಾಲರ್‌ನಿಂದ (ಅಂದಾಜು 10.43 ಲಕ್ಷ ಕೋಟಿಯಿಂದ)  121.6 ಶತಕೋಟಿ ಡಾಲರ್‌ಗೆ (ಅಂದಾಜು 9.02 ಲಕ್ಷ ಕೋಟಿಗೆ) ಕುಸಿದಿದೆ. ಹೀಗಾಗಿ ಅವರು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬಿಲ್‌ಗೇಟ್ಸ್‌ಗಿಂತ ಕೆಳಗಿನ 5ನೇ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ಬ್ಲೂಮ್‌ಬರ್ಗ್‌ ಬಿಲೇನಿಯರ್ಸ್‌ ಸೂಚ್ಯಂಕ ತಿಳಿಸಿದೆ.

ಫೇಸ್‌ಬುಕ್‌ನ ಆಂತರಿಕ ಸಮಸ್ಯೆಗಳನ್ನು ಉಲ್ಲೇಖಿಸಿ ʼದಿ ವಾಲ್‌ ಸ್ಟ್ರೀಟ್‌ ಜರ್ನಲ್‌ʼ ಪತ್ರಿಕೆಯು ಸೆಪ್ಟೆಂಬರ್‌ 13ರಿಂದ ಸರಣಿ ಲೇಖನಗಳನ್ನು ಪ್ರಕಟಿಸಿತ್ತು. ಅಮೆರಿಕದ ಕ್ಯಾಪಿಟಲ್‌ ಮೇಲೆ ಜನವರಿ 6ರಂದು ನಡೆದ ದಾಳಿ ಬಗೆಗಿನ ತಪ್ಪು ಮಾಹಿತಿ ಪ್ರಸಾರವನ್ನು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ತಡೆಯಬಹುದಿತ್ತು, ಹದಿಹರೆಯದ ಹುಡುಗಿಯರ ಮಾನಸಿಕ ಆರೋಗ್ಯದ ಮೇಲೆ ಇನ್‌ಸ್ಟಾಗ್ರಾಂ ಪರಿಣಾಮ ಉಂಟುಮಾಡುತ್ತದೆ ಎಂಬುದೂ ಸೇರಿದಂತೆ ಹಲವು ಲೇಖನಗಳು ಪ್ರಕಟವಾಗಿದ್ದವು. ಇವು ಸರ್ಕಾರದ ಗಮನ ಸೆಳೆದಿದ್ದವು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಫೇಸ್‌ಬುಕ್‌, ರಾಜಕೀಯ ಧ್ರುವೀಕರಣ ಸೇರಿದಂತೆ ತನ್ನ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು ಸಂಕೀರ್ಣವಾಗಿವೆ. ಇವು ತಂತ್ರಜ್ಞಾನದಿಂದ ಮಾತ್ರವೇ ಸೃಷ್ಟಿಯಾಗಿರುವವಲ್ಲ ಎಂದು ಒತ್ತಿ ಹೇಳಿತ್ತು.

ಇವನ್ನೂ ಓದಿತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು