ವಿಕಸಿತ ಭಾರತದ ಗುರಿಗೆ ಧಕ್ಕೆ?
ಕೇಂದ್ರ ಸರ್ಕಾರವು 2047ರ ವೇಳೆಗೆ ‘ವಿಕಸಿತ ಭಾರತ’ದ ಗುರಿ ಹೊಂದಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಗುರಿ ಸಾಧನೆಗೆ ಜಿಡಿಪಿಯ ಸರಾಸರಿ ಬೆಳವಣಿಗೆಯು ಶೇ 7.8ರಷ್ಟಿರಬೇಕಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ಇದಕ್ಕೆ ಪೂರಕವಾಗಿ ಹಣಕಾಸು ವಲಯದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ. ಆದರೆ 2000ರ ಇಸವಿಯಿಂದ 2024ರವರೆಗೆ ಭಾರತದ ಆರ್ಥಿಕತೆಯ ಸರಾಸರಿ ಬೆಳವಣಿಗೆಯು ಶೇ 6.3ರಷ್ಟಿದೆ ಎಂದು ವಿವರಿಸಿದೆ. ‘ಭಾರತವು ಅತಿಹೆಚ್ಚು ಆದಾಯ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಎಲ್ಲಾ ವಲಯಗಳು ಬೆಳವಣಿಗೆ ದಾಖಲಿಸಬೇಕಿದೆ. ಇಲ್ಲವಾದರೆ ವಿಕಸಿತ ಭಾರತದ ಆಶಯಕ್ಕೆ ಹಿನ್ನಡೆಯಾಗಲಿದೆ’ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.