ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಡ್‌ ಇನ್ ಇಂಡಿಯಾ ಜಲಜನಕ ವಾಹನ ತಯಾರಿಕೆ: CEOಗಳೊಂದಿಗೆ PM ಮೋದಿ ಮಾತುಕತೆ

Published 9 ಜನವರಿ 2024, 13:27 IST
Last Updated 9 ಜನವರಿ 2024, 13:27 IST
ಅಕ್ಷರ ಗಾತ್ರ

ಗಾಂಧಿನಗರ: ಜಲಜನಕ ಆಧಾರಿತ ಹಸಿರು ಇಂಧನ ಬಳಕೆಯ ವಾಹನಗಳನ್ನು ಭಾರತದಲ್ಲಿ ತಯಾರಿಸುವ ಕುರಿತು ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತುಕತೆ ನಡೆಸಿದರು.

ಜ. 10ರಿಂದ ಆರಂಭವಾಗಲಿರುವ ‘ವೈಬ್ರೆಂಟ್ ಗುಜರಾತ್’ ಎಂಬ ಆರ್ಥಿಕ ಹೂಡಿಕೆ ಸಮಾವೇಶದ ಉದ್ಘಾಟನೆಗೆ ಒಂದು ದಿನ ಮೊದಲೇ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಅವರು, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು, ಆರ್ಥಿಕತೆ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಕುರಿತು ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸಭೆಯಲ್ಲಿ ಸುಜುಕಿ ಮೋಟಾರ್ಸ್‌, ಮೈಕ್ರಾನ್‌ ಟೆಕ್ನಾಲಜೀಸ್, ಎಪಿ ಮೊಲ್ಲೆರ್‌ ಸೇರಿದಂತೆ ವಿವಿಧ ಕಂಪನಿಗಳ ಸಿಇಒಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಸುಜುಕಿ ಮೋಟಾರ್ಸ್‌ನ ನಿರ್ದೇಶಕ ಮತ್ತು ಅಧ್ಯಕ್ಷ ತೊಷಿಹಿರೊ ಸುಜುಕಿ, ‘ಜಾಗತಿಕ ವಾಹನ ಕ್ಷೇತ್ರದಲ್ಲಿ ಮಾರುತಿ ಸುಜುಕಿ ಮೂಲಕ ಭಾರತದಲ್ಲಿ ತಯಾರಾಗುವ ವಾಹನಗಳನ್ನು ಮುಂಚೂಣಿಗೆ ತರುವ ಯೋಜನೆ ಹೊಂದಲಾಗಿದೆ. ಮೇಡ್‌ ಇನ್ ಇಂಡಿಯಾ ವಾಹನಗಳ ರಫ್ತು ಪ್ರಮಾಣ ಹೆಚ್ಚಿಸಲಾಗುತ್ತಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿರುವ ವಾಹನಗಳ ಸ್ಕ್ರಾಪಿಂಗ್ ಹಾಗೂ ಮರುಬಳಕೆಯ ಉತ್ತಮ ಅಭ್ಯಾಸಗಳನ್ನು ಇಲ್ಲಿ ಅಳವಡಿಸುವ ಪ್ರಯತ್ನ ನಡೆಸಿದ್ದೇವೆ’ ಎಂದಿದ್ದಾರೆ.

ಮಾರುತಿ ಸುಜುಕಿ ಕಂಪನಿಯು ಗುಜರಾತ್‌ನಲ್ಲಿ ತನ್ನ 2ನೇ ಕಾರು ತಯಾರಿಕಾ ಘಟಕವನ್ನು ತೆರೆಯಲಿದ್ದು, ದೇಶದಲ್ಲಿ ತನ್ನ ಒಟ್ಟು ಘಟಕಗಳ ಸಂಖ್ಯೆ 5ಕ್ಕೆ ಹೆಚ್ಚಿಸಿಕೊಳ್ಳಲಿದೆ. 

ಪ್ರಧಾನಿಯೊಂದಿಗೆ ಚರ್ಚೆ ನಡೆಸಿದ ಮೈಕ್ರಾನ್‌ ಟೆಕ್ನಾಲಜೀಸ್‌ನ ಸಂಜಯ್ ಮಲ್ಹೋತ್ರಾ ಅವರು, ‘ಭಾರತದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ವಿಸ್ತರಣೆಗೆ ಅಗತ್ಯ ಶ್ರಮ ವಹಿಸಲಾಗುವುದು’ ಎಂದಿದ್ದಾರೆ.

ದುಬೈ ಮೂಲದ ಡಿಪಿ ವರ್ಲ್ಡ್‌ನ ಸಮೂಹ ಅಧ್ಯಕ್ಷ ಅಹ್ಮದ್‌ ಬಿನ್ ಸುಲೇಮಾನ್‌, ಗುಜರಾತ್‌ನ ಕಾಂಡ್ಲಾದಲ್ಲಿ ದೀನ್‌ದಯಾಳ್ ಪೋರ್ಟ್ ಪ್ರಾಧಿಕಾರ ಅಭಿವೃದ್ಧಿ ಕುರಿತಂತೆ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ವಿಷಯವನ್ನು ತಿಳಿಸಿದರು.

ಗುಜರಾತ್‌ನ ಗಿಫ್ಟ್‌ ಸಿಟಿಯಲ್ಲಿ ಹೂಡಿಕೆ ಬಯಸಿದ ಕಂಪನಿಗಳಿಗೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ಹಸಿರು ಇಂಧನ ಹೈಡ್ರೋಜೆನ್‌ ವಾಹನಗಳ ಅಭಿವೃದ್ಧಿ ಮತ್ತು ಲಾಜಿಸ್ಟಿಕ್ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ಹೊಂದುವಂತೆ ಕಂಪನಿಗಳ ಮುಖ್ಯಸ್ಥರಿಗೆ ತಿಳಿಸಿದರು.

ವೈಬ್ರೆಂಟ್ ಗುಜರಾತ್ ಜಾಗತಿಕ ಸಮಾವೇಶವು ಜ. 10ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಸುಮಾರು ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. 133 ರಾಷ್ಟ್ರಗಳ ವ್ಯಾಪಾರ ಕ್ಷೇತ್ರದ ಮುಖ್ಯಸ್ಥರು, ಸಚಿವರು ಹಾಗೂ ರಾಜತಾಂತ್ರಿಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 

ಗೌತಮ್ ಅದಾನಿ, ಮುಕೇಶ್ ಅಂಬಾನಿ, ಟಾಟಾ ಸಮೂಹದ ಅಧ್ಯಕ್ಷ , ಮೈಕ್ರೊಸಾಫ್ಟ್, ಆಲ್ಪಬೆಟ್‌ನ ಗೂಗಲ್‌ ಸೇರಿದಂತೆ ಪ್ರಮುಖ ಕಂಪನಿಗಳ ಮುಖ್ಯಸ್ಥರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT