ಶುಕ್ರವಾರ, ಜುಲೈ 1, 2022
24 °C

ಎಂಎಸ್‌ಎಂಇ ಉದ್ದಿಮೆ ಸಲಹೆ | ವ್ಯವಹಾರ ಪ್ರಾರಂಭಿಸಲು ಈಗಿನ ಪರಿಸ್ಥಿತಿ ಸೂಕ್ತವೇ

ಮದನ್‌ ಪದಕಿ Updated:

ಅಕ್ಷರ ಗಾತ್ರ : | |

prajavani

- ಗಜಾನನ, ಹುಬ್ಬಳ್ಳಿ

ಪ್ರಶ್ನೆ: ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಸೇವೆಗಳನ್ನು ಒದಗಿಸುವ ಸಂಸ್ಥೆಯೊಂದನ್ನು ನಾನು ನಡೆಸುತ್ತಿದ್ದೇನೆ. ಈ ವಹಿವಾಟು ವೇಗವಾಗಿ ಬೆಳೆಯುತ್ತಿದ್ದು, ವ್ಯವಹಾರ  ನಿರ್ವಹಿಸಲು ಮತ್ತು ಶಾಸನಬದ್ಧ ಮಾಹಿತಿಯನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ನೀಡುವುದು ನನಗೆ ಕಷ್ಟಸಾಧ್ಯವಾಗಿದೆ. ಈ ಉದ್ದೇಶಕ್ಕಾಗಿ ಪೂರ್ಣಾವಧಿಯ ನೌಕರರನ್ನು ನೇಮಕ ಮಾಡಿಕೊಂಡಲ್ಲಿ ನನ್ನ ಖರ್ಚು ಹೆಚ್ಚಾಗುತ್ತದೆ. ಈ ಜವಾಬ್ದಾರಿಗಳನ್ನು ನಿರ್ವಹಿಸಲು ಬೇರಾವುದೇ ಮಾರ್ಗವಿದೆಯೇ?

ನೀವು ಸಮಾಜಕ್ಕೆ ಮಹತ್ತರವಾದ ಸೇವೆಯನ್ನು ಸಲ್ಲಿಸುತ್ತಿರುವಿರಿ. ಹೌದು, ಇಂತಹ ಸಂಸ್ಥೆಗಳನ್ನು ನಿರ್ವಹಿಸುವುದು ಕಷ್ಟಸಾಧ್ಯ ಮತ್ತು ಈ ಉದ್ದೇಶಕ್ಕಾಗಿ ನಿಮಗೆ ನೌಕರರ ಅವಶ್ಯಕತೆಯಿದೆ. ಇದಕ್ಕಾಗಿ ನೀವು ಸ್ಥಳೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಕಚೇರಿಯನ್ನು ಸಂಪರ್ಕಿಸಬಹುದು. ಅವರು ಬಹುಶಃ ಉಚಿತವಾಗಿ ಅಥವಾ ಕಡಿಮೆ ಶುಲ್ಕ ಪಡೆದು ನಿಮ್ಮ ಅವಶ್ಯಕತೆಯನ್ನು ಪೂರೈಸಬಹುದು.

***

- ಅನುರಾಧ, ಮೈಸೂರು

ಪ್ರಶ್ನೆ: ಲಾಕ್‌ಡೌನ್ ಮೊದಲು ಕರಕುಶಲ ಸಾಮಗ್ರಿಗಳನ್ನು ಖರೀದಿಸಿ ಮಾರುವ ಉದ್ಯಮ  ಪ್ರಾರಂಭಿಸಬೇಕೆಂಬ ಯೋಜನೆಯನ್ನು ಹೊಂದಿದ್ದೆ. ಬ್ಯಾಂಕ್ ಸಾಲಕ್ಕಾಗಿ ಯೋಜನಾ ವರದಿ ಕೂಡ ಸಿದ್ಧಪಡಿಸಿದ್ದೆ. ಆದರೆ ಈ ವ್ಯವಹಾರವನ್ನು ಪ್ರಾರಂಭಿಸಲು ಈಗಿನ ಪರಿಸ್ಥಿತಿ ಸೂಕ್ತವೇ ಎಂಬುದರ ಕುರಿತು ನಾನು ಗೊಂದಲದಲ್ಲಿದ್ದೇನೆ. ದಯವಿಟ್ಟು ಮಾರ್ಗದರ್ಶನ ನೀಡಿ.

ಪ್ರಸ್ತುತ ಪರಿಸ್ಥಿತಿಯಲ್ಲಿ ಹಲವಾರು ಬ್ಯಾಂಕುಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಸೇವೆಗಳನ್ನು ಒದಗಿಸುತ್ತಿದ್ದು, ಸಾಲ ಪಡೆಯುವ ಪ್ರಕ್ರಿಯೆ ಸಮಯ ತೆಗೆದುಕೊಳ್ಳಬಹುದು. ಆದುದರಿಂದ ಸಾಲಕ್ಕಾಗಿ ನಿಮ್ಮ ಅರ್ಜಿಯನ್ನು ಬ್ಯಾಂಕಿಗೆ ನೀವು ಸಲ್ಲಿಸಿರಿ ಮತ್ತು ಸೂಕ್ತ ಸಮಯದಲ್ಲಿ ಸಾಲ ಮಂಜೂರು ಮಾಡಿಸಿಕೊಳ್ಳಿರಿ. ಏತನ್ಮಧ್ಯೆ, ಕೋವಿಡ್ ನಂತರ ಮಾರುಕಟ್ಟೆ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿರಿ. ಪರಿಸ್ಥಿತಿಯು ಖಂಡಿತಾ ಉತ್ತಮವಾಗುತ್ತದೆ ಮತ್ತು ವ್ಯವಹಾರಕ್ಕೆ ಅವಕಾಶ ಒದಗುತ್ತದೆ. ಸಣ್ಣ ಮೊತ್ತದ ಸಾಲವನ್ನು ಪಡೆದು ವ್ಯವಹಾರವನ್ನು ಸಣ್ಣದಾಗಿಯೇ ಪ್ರಾರಂಭಿಸಿ ನಂತರ ಕ್ರಮೇಣ ವಿಸ್ತರಿಸಿಕೊಳ್ಳಿ. ಹೀಗೆ ಮಾಡುವುದರಿಂದ ವ್ಯವಹಾರ ನಡೆಸುವಲ್ಲಿನ ರಿಸ್ಕ್‌ಗಳನ್ನು ಸಮರ್ಥವಾಗಿ ಎದುರಿಸಲು ಸುಲಭವಾಗುತ್ತದೆ.

***

- ಉರೂಜ್, ಬೆಂಗಳೂರು

ಪ್ರಶ್ನೆ: ನಾನು ಆಹಾರ ಸಂಸ್ಕರಣ ಘಟಕವನ್ನು ಸ್ಥಾಪಿಸುವ ಆಲೋಚನೆ ಹೊಂದಿದ್ದೇನೆ. ವಿಶೇಷ ಮತ್ತು ಆರೋಗ್ಯಕರವಾದ ಕುರುಕಲು ತಿಂಡಿಗಳನ್ನು (ಸ್ನ್ಯಾಕ್‌) ತಯಾರು ಮಾಡುವುದು ನನ್ನ ಉದ್ದೇಶ. ಈ ಘಟಕ ಸ್ಥಾಪಿಸಲು ನಾನು ಯಾವ ಯಾವ ಪ್ರಾಧಿಕಾರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ನನಗೆ ದಯವಿಟ್ಟು ತಿಳಿಸಿರಿ. ನಾನು ತಯಾರಿಸುವ ಸ್ನ್ಯಾಕ್‌ಗಳಲ್ಲಿನ ಪೋಷಕಾಂಶಗಳ ಕುರಿತು ಯಾರಿಂದ ನಾನು ಮಾಹಿತಿಯನ್ನು ಪಡೆಯಬಹುದು? 

ವಾರ್ಷಿಕ ವಹಿವಾಟು ₹  12 ಲಕ್ಷ ಮೀರದ /ದಿನವೊಂದಕ್ಕೆ 100 ಕೆಜಿ ಅಥವಾ ಲೀಟರ್ ಮೀರದ ಆಹಾರ ಸಂಸ್ಕರಣ ಮಾಡುವ ಕ್ಷಮತೆಯುಳ್ಳ  ಸೂಕ್ಷ್ಮ ಉದ್ದಿಮೆಯೊಡನೆ ನಿಮ್ಮ ವ್ಯವಹಾರ ಪ್ರಾರಂಭಿಸುವಿರಿ ಎಂದು ನಾನು ಭಾವಿಸಿದ್ದೇನೆ. ಅಂತಹ ಸಂದರ್ಭದಲ್ಲಿ ನೀವು ಕೇವಲ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಪ್ರಾಧಿಕಾರದಿಂದ (FSSAI) ಪ್ರಮಾಣ ಪತ್ರವನ್ನು ಪಡೆದರೆ ಸಾಕು. ಆದರೆ, ವ್ಯವಹಾರವನ್ನು ಪ್ರಾರಂಭಿಸಲು ಅವಶ್ಯಕವಾದ ನಿರಾಕ್ಷೇಪಣ ಪತ್ರಗಳು / ಮುನಿಸಿಪಾಲಿಟಿಯಿಂದ ಪರವಾನಗಿ, ಅಗ್ನಿಶಾಮಕ ದಳದವರಿಂದ ಪರವಾನಗಿ ಮತ್ತು ಇತ್ಯಾದಿ ಸುರಕ್ಷತಾ ಕ್ರಮಗಳಿಗೆ ಅನುಮತಿಯನ್ನು ಪಡೆಯತಕ್ಕದ್ದು.

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು (CFTRI) ಸಮಾಲೋಚನಾ ವಿಭಾಗವನ್ನು ಹೊಂದಿದ್ದು, ನಿಮ್ಮ ಆಹಾರ ಉತ್ಪನ್ನಗಳ ಪೋಷಕಾಂಶ ಮತ್ತು ಇತ್ಯಾದಿ ತಾಂತ್ರಿಕ ಮಾಹಿತಿಗಳನ್ನು ಒದಗಿಸಲು ನೆರವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು