ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ ಸಲಹೆ | ಹಿಂದಿನ ಸಾಲ ಎನ್‌ಪಿಎ ಆಗಿದೆ, ಮತ್ತೆ ಸಾಲ ಸಿಕ್ಕೀತೇ?

Last Updated 30 ಜೂನ್ 2020, 19:45 IST
ಅಕ್ಷರ ಗಾತ್ರ

* ನಾನು ಕಲ್ಪತರು ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದಿರುತ್ತೇನೆ. ಸಾಲದ ಅಸಲನ್ನು ಮರುಪಾವತಿ ಮಾಡಿದ್ದು, ಬಡ್ಡಿ ಪಾವತಿ ಮಾಡಲು ಸಾಧ್ಯವಾಗಿಲ್ಲ. ಈಗ ಸಾಲದ ಖಾತೆಯು ವಸೂಲಾಗದ ಸಾಲ (ಎನ್‌ಪಿಎ) ಎಂದು ವರ್ಗೀಕರಣಗೊಂಡಿದೆ. ಹೀಗಾಗಿ ಎರಡು ವರ್ಷಗಳ ಹಿಂದೆ ನಾನು ನನ್ನ ವ್ಯವಹಾರ ನಿಲ್ಲಿಸಿದೆ. ಈಗ ಪುನ: ನಾನು ವ್ಯವಹಾರ ಪ್ರಾರಂಭಿಸುವ ಆಲೋಚನೆ ಹೊಂದಿದ್ದೇನೆ. ಬ್ಯಾಂಕುಗಳಿಂದ ಸಾಲ ಪಡೆಯವಲ್ಲಿ ನಾನು ಎದುರಿಸಬಹುದಾದ ಸವಾಲುಗಳೇನು?

- ಕೇಶವ, ಚಿಕ್ಕಮಗಳೂರು

ಕಲ್ಪತರು ಗ್ರಾಮೀಣ ಬ್ಯಾಂಕ್ ಯಾವುದಾದರೂ ಕ್ರೆಡಿಟ್ ಬ್ಯೂರೊಗೆ ನಿಮ್ಮ ಸಾಲದ ಖಾತೆಯು ‘ಎನ್‌ಪಿಎ’ ಆಗಿರುವುದರ ಕುರಿತು ಮಾಹಿತಿ ನೀಡಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹೊಸ ಸಾಲಕ್ಕಾಗಿ ನೀವು ಅರ್ಜಿ ಹಾಕಿದಾಗ, ಯಾವುದೇ ಬ್ಯಾಂಕು ನಾಲ್ಕು ಕ್ರೆಡಿಟ್ ಬ್ಯೂರೊಗಳ ಪೈಕಿ (ಎಕ್ಸ್ ಪೇರಿಯನ್, ಸಿಬಿಲ್, ಹೈಮಾರ್ಕ್ ಅಥವಾ ಈಕ್ವಿಫಾಕ್ಸ್) ಯಾವುದಾದರೂ ಒಂದು ಬ್ಯೂರೊದಿಂದ ನಿಮ್ಮ ಸಾಲ ಮರುಪಾವತಿ ಇತಿಹಾಸ ಕುರಿತು ಮಾಹಿತಿ ಕೇಳುತ್ತದೆ. ನಿಮ್ಮ ಸಾಲದ ಅರ್ಜಿಯನ್ನು ಮೌಲ್ಯಮಾಪನ ಮಾಡುವ ಉದ್ದೇಶಕ್ಕಾಗಿ ಹೀಗೆ ಮಾಡಲಾಗುತ್ತದೆ. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಅಥವಾ ತಡವಾಗಿ ಮರುಪಾವತಿ ಮಾಡಿರುವ ಇತಿಹಾಸ ಹೊಂದಿದ್ದಲ್ಲಿ / ಮರುಪಾವತಿ ಮಾಡಲು ವಿಫಲರಾಗಿದ್ದಲ್ಲಿ, ಸಾಲ ಮಂಜೂರಾತಿಗಾಗಿ ನಿಮ್ಮ ಅರ್ಜಿ ಪರಿಗಣಿಸುವುದಿಲ್ಲ. ಆದುದರಿಂದ ನೀವು ಕಲ್ಪತರು ಗ್ರಾಮೀಣ ಬ್ಯಾಂಕಿಗೆ ತೆರಳಿ ಸಾಲವನ್ನು ಒಂದೇ ಬಾರಿಗೆ ತೀರಿಸುವ ಕುರಿತು ಮಾತುಕತೆ ನಡೆಸಿ, ಭಾಗಶಃ ಬಡ್ಡಿ ಮನ್ನಾ ಮಾಡುವಂತೆ ವಿನಂತಿಸಿಕೊಳ್ಳಿ. ನಿಮ್ಮ ಪರಿಸ್ಥಿತಿಯನ್ನು ಬ್ಯಾಂಕಿಗೆ ವಿವರಿಸಿರಿ ಹಾಗೂ ಸಾಲವನ್ನು ಇತ್ಯರ್ಥ ಮಾಡಿರಿ. ನಂತರ ಬ್ಯಾಂಕು ನಿಮ್ಮ ಸಾಲದ ಮರುಪಾವತಿ ಇತಿಹಾಸವನ್ನು ಅಪ್ ಡೇಟ್ ಮಾಡಿದೆಯೇ ಎಂದು ಖಾತರಿ ಪಡಿಸಿಕೊಳ್ಳಿರಿ. ಈ ಕ್ರಮದಿಂದ ನಿಮ್ಮ ದಾಖಲೆ ತಿದ್ದುಪಡಿಯಾಗಿ, ನೀವು ಭವಿಷ್ಯದಲ್ಲಿ ಬ್ಯಾಂಕುಗಳಿಂದ ಸಾಲ ನಿರೀಕ್ಷಿಸಬಹುದು.

*ನಾನು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಸಂಜೆ 5.30 ರಿಂದ ರಾತ್ರಿ 8.30ರ ವರೆಗೆ ಅರೆಕಾಲಿಕ ವ್ಯಾಪಾರ ಮಾಡುವ ಉದ್ದೇಶ ಹೊಂದಿದ್ದೇನೆ. ನಾನು ಯಾವ ವ್ಯಾಪಾರ ಮಾಡಬೇಕೆಂದು ಹೇಗೆ ತೀರ್ಮಾನಿಸುವುದು.

-ಆತ್ಮಾನಂದ, ಮಂಡ್ಯ

ಮೊದಲನೆಯದಾಗಿ, ಸಾಮಾನ್ಯವಾಗಿ ಯಾವುದೇ ಉದ್ಯಮವಾದರೂ ಹೆಚ್ಚು ಸಮಯ ಮತ್ತು ಗಮನವನ್ನು ನೀಡಲೇಬೇಕಾಗುತ್ತದೆ. ವಿಶೇಷವಾಗಿ ಉದ್ಯಮ ಒಂದು ಹಂತದಲ್ಲಿ ನೆಲೆಗೊಳ್ಳುವವರೆಗೂ ಇದು ಅವಶ್ಯಕ. ಹೆಚ್ಚಾಗಿ, ನಿಮ್ಮ ಹಿನ್ನೆಲೆ, ಅನುಭವ, ವಾಸ ಮಾಡುವ ಪ್ರದೇಶ, ಅಲ್ಲಿ ವ್ಯಾಪಾರ-ವಹಿವಾಟಿಗೆ ಲಭ್ಯವಿರುವ ಅವಕಾಶಗಳು ಹಾಗೂ ನಿಮ್ಮ ಹಣ ಹೂಡಿಕೆ ಸಾಮರ್ಥ್ಯದ ಮೇಲೆ ನೀವು ಯಾವ ವ್ಯಾಪಾರ-ವಹಿವಾಟನ್ನು ಮಾಡಬಹುದು ಎಂದು ತೀರ್ಮಾನಿಸಬಹುದು. ಕಡಿಮೆ ಹಣ ಹೂಡಿಕೆ ಮತ್ತು ಹೆಚ್ಚು ಸಮಯದ ಅವಶ್ಯಕತೆ ಇರದ ಮಾರ್ಕೆಟಿಂಗ್/ಟ್ರೇಡಿಂಗ್ನಂತಹ ಅವಕಾಶಗಳೂ ಲಭ್ಯ ಇವೆ. ನಿಮ್ಮ ಕೌಶಲ್ಯ ಹಾಗೂ ಜಾಣ್ಮೆಯ ಆಧಾರದ ಮೇಲೆ ಮತ್ತು ಸ್ಥಳೀಯ ಸ್ಪರ್ಧಾತ್ಮಕತೆ ಅವಲಂಬಿಸಿ ನಿಮ್ಮ ವಹಿವಾಟನ್ನು ಆರಿಸಿಕೊಳ್ಳಿ.

* ನನ್ನ ಪತ್ನಿ ಮತ್ತು ಮಗಳು ಈಗಷ್ಟೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆನ್‌ಲೈನ್‌ನಲ್ಲಿ ಹೇಳಿಕೊಡಲು ಪ್ರಾರಂಭಿಸಿದ್ದಾರೆ. ಅವರ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಮಾರುಕಟ್ಟೆ ಒದಗಿಸುವ ಉದ್ದೇಶವನ್ನು ನಾನು ಹೊಂದಿದ್ದೇನೆ. ಆದರೆ, ಹೀಗೆ ಮಾಡಲು ಸಾಕಷ್ಟು ಮಾಧ್ಯಮಗಳು ಲಭ್ಯವಿರುವುದನ್ನೂ ನಾನು ಗಮನಿಸಿದ್ದೇನೆ. ನನ್ನ ಉದ್ದೇಶಕ್ಕಾಗಿ ನಾನು ಯಾವ ಸಾಮಾಜಿಕ ಮಾಧ್ಯಮ ಆರಿಸಿಕೊಳ್ಳಬೇಕು?

- ನಟರಾಜನ್‌, ಮೈಸೂರು

● ಯಾವುದೇ ಸಾಮಾಜಿಕ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಸಾಕಷ್ಟು ಶ್ರಮಪಡಬೇಕಾದ ಅವಶ್ಯಕತೆಯಿದೆ. ಆದುದರಿಂದ ಯಾವುದಾದರೂ 2-3 ಮಾಧ್ಯಮಗಳನ್ನು ಆರಿಸಿಕೊಂಡು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಸೂಕ್ತ. ಸಂಗೀತ ತರಗತಿಗಳ ವಿಡಿಯೊ, ಪೋಟೊ, ರೆಕಾರ್ಡ್ ಮಾಡಿದ ಕಛೇರಿಗಳನ್ನು ನೀವು ಅಪ್‌ಲೋಡ್ ಮಾಡಬಹುದು. ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನೂ ನೀಡಬಹುದು. ದೇಶದಲ್ಲಿ ಫೇಸ್‌ಬುಕ್ ಅತಿ ಹೆಚ್ಚು ಜನಪ್ರಿಯ ಸಾಮಾಜಿಕ ಮಾಧ್ಯಮ. ಸಂಗೀತದಲ್ಲಿ ಆಸಕ್ತಿ ಇರುವವರ ಗಮನ ಸೆಳೆಯಲು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿರಿ. ಇದು ವಿದ್ಯಾರ್ಥಿಗಳನ್ನು ಆಕರ್ಷಿಸಲು ಉತ್ತಮ ಮಾರ್ಗ. ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂನಲ್ಲೂ ಕೂಡ ನೀವು ಮಾಹಿತಿ ನೀಡಬಹುದಾಗಿದೆ. ಬ್ಲಾಗ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆ ಅಲ್ಲದಿದ್ದರೂ ನಿಮ್ಮನ್ನು ಸಂಗೀತ ಶಿಕ್ಷಣ ಕ್ಷೇತ್ರದಲ್ಲಿ ಪರಿಣತ ಎಂದು ಬಿಂಬಿಸಲು ಸಹಾಯ ಮಾಡುತ್ತವೆ. ನಿಮ್ಮ ಜಾಲತಾಣಕ್ಕೆ ಹೆಚ್ಚಿನ ಟ್ರಾಫಿಕ್ ಪಡೆಯಲು ಇದು ಸುಲಭ ಮಾರ್ಗ. ಗೂಗಲ್‌ನಲ್ಲಿ ಸಂಗೀತ ಶಿಕ್ಷಣ ವಿದ್ಯಾರ್ಥಿಗಳು ಹುಡುಕಾಟಕ್ಕೆ ಬಳಸುವ ಪದಗಳನ್ನು ಗುರ್ತಿಸಿ ಅವೇ ಪದಗಳನ್ನು ನಿಮ್ಮ ಬ್ಲಾಗ್‌ನಲ್ಲಿ ಬಳಸಿರಿ. ಅಂತರ್ಜಾಲದಲ್ಲಿ ನಿಮ್ಮನ್ನು ಹೆಚ್ಚಾಗಿ ಕಾಣಿಸುವಂತೆ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಅವಕಾಶಗಳೂ ಲಭ್ಯವಿವೆ. ಇದಕ್ಕಾಗಿ ಹಣ ತೆರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT