ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಚಿಂಗ್‌ ಸೆಂಟರ್‌ಗಳ ಅನ್ಯಾಯ: ಸ್ಪಂದಿಸಿದ ಎನ್‌ಸಿಎಚ್‌ ಸಹಾಯವಾಣಿ– ಹಣ ವಾಪಸ್

Published : 22 ಸೆಪ್ಟೆಂಬರ್ 2024, 13:41 IST
Last Updated : 22 ಸೆಪ್ಟೆಂಬರ್ 2024, 13:41 IST
ಫಾಲೋ ಮಾಡಿ
Comments

ನವದೆಹಲಿ: ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಆಕಾಂಕ್ಷಿಗಳ ಅಹವಾಲುಗಳಿಗೆ ಸ್ಪಂದಿಸಿರುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು (ಎನ್‌ಸಿಎಚ್‌) ಕೋಚಿಂಗ್ ಸೆಂಟರ್‌ಗಳಿಂದ ₹1 ಕೋಟಿ ಮೊತ್ತವನ್ನು ವಾಪಸ್‌ ಕೊಡಿಸಲು‌ ಕ್ರಮವಹಿಸಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.

ಯುಪಿಎಸ್‌ಸಿ, ಐಐಟಿ ಪ್ರವೇಶ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ಶುಲ್ಕ ಪಾವತಿಸುತ್ತಾರೆ. ಆದರೆ, ಸರಿಯಾಗಿ ತರಗತಿಗಳನ್ನು ನಡೆಸದೆ ಕೆಲವು ಕೋಚಿಂಗ್‌ ಸೆಂಟರ್‌ಗಳು ಅನ್ಯಾಯ ಎಸಗುತ್ತವೆ. ಶುಲ್ಕವನ್ನೂ ಮರಳಿಸುವುದಿಲ್ಲ. ಈ ಬಗ್ಗೆ ಸಹಾಯವಾಣಿಯಲ್ಲಿ ಸಲ್ಲಿಕೆಯಾದ ಅಹವಾಲುಗಳಿಗೆ ಸ್ಪಂದಿಸಲಾಗಿದೆ ಎಂದು ಹೇಳಿದೆ.

ಕೇಂದ್ರ ಗ್ರಾಹಕ ಸಚಿವಾಲಯವು ಮಧ್ಯಪ್ರವೇಶಿಸಿದ್ದು, ವಿದ್ಯಾರ್ಥಿಗಳಿಗೆ ಹಣ ಹಿಂದಿರುಗಿಸುವ ಸಂಬಂಧ ದಾವೆ ಪೂರ್ವ ಹಂತದ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿಸಿದೆ.

‘ತಪ್ಪಿತಸ್ಥ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಚಿವಾಲಯದ ಜವಾಬ್ದಾರಿಯಾಗಿದೆ. ಇದರಿಂದ ಗ್ರಾಹಕರ ಹಕ್ಕುಗಳಿಗೆ ರಕ್ಷಣೆ ಸಿಗಲಿದೆ. ಜೊತೆಗೆ, ಕೋಚಿಂಗ್‌ ಸೆಂಟರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.

2021–2022ರಲ್ಲಿ 4,815, 2022–23ರಲ್ಲಿ 5,351 ಹಾಗೂ 2023–24ರಲ್ಲಿ 16,276 ವಿದ್ಯಾರ್ಥಿಗಳು ಸಹಾಯವಾಣಿಗೆ ಅಹವಾಲು ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಅನ್ಯಾಯಕ್ಕೆ ಒಳಗಾದ 6,980 ವಿದ್ಯಾರ್ಥಿಗಳಿಂದ ಅಹವಾಲು ಸಲ್ಲಿಕೆಯಾಗಿವೆ. ಇವುಗಳ ತ್ವರಿತ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಪ್ರವೇಶಕ್ಕೂ ಮೊದಲು ನೀಡಿದ್ದ ಭರವಸೆ ಈಡೇರಿಸುವಲ್ಲಿ ಕೋಚಿಂಗ್ ಸೆಂಟರ್‌ಗಳು ವಿಫಲವಾಗಿರುವುದು, ಅಸಮರ್ಪಕ ಬೋಧನೆ ಹಾಗೂ ಏಕಾಏಕಿ ಕೋರ್ಸ್‌ಗಳ ರದ್ದತಿಗೆ ಸಂಬಂಧಿಸಿದಂತೆ ಸಹಾಯವಾಣಿಗೆ ದೂರುಗಳು ಸಲ್ಲಿಕೆಯಾಗಿವೆ.

ಬೆಂಗಳೂರು ಮೂಲದ ವಿದ್ಯಾರ್ಥಿಗೆ ₹3.5 ಲಕ್ಷ ಹಾಗೂ ಗುಜರಾತ್‌ ಮೂಲದ ವಿದ್ಯಾರ್ಥಿಗೆ ₹8.36 ಲಕ್ಷ ಮೊತ್ತವು ಕೋಚಿಂಗ್‌ ಸೆಂಟರ್‌ನಿಂದ ಮರುಪಾವತಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳು ಟೋಲ್‌ ಪ್ರೀ ಸಂಖ್ಯೆ 1915 ಅಥವಾ www.consumerhelpline.gov.in. ಮೂಲಕ ಅಹವಾಲು ಸಲ್ಲಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT