ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

Last Updated 2 ಜೂನ್ 2021, 16:19 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಎಲ್ಲ ಉತ್ಪನ್ನಗಳಲ್ಲಿನ ಪೌಷ್ಟಿಕಾಂಶ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ (ಎಫ್‌ಎಂಸಿಜಿ) ಉತ್ಪನ್ನಗಳ ಕಂಪನಿ ನೆಸ್ಲೆ ಹೇಳಿದೆ.

ಕಂಪನಿಯ ಪ್ರಮುಖ ಆಹಾರ ಹಾಗೂ ಪಾನೀಯ ಉತ್ಪನ್ನಗಳ ಪೈಕಿ ಶೇಕಡ 60ರಷ್ಟಕ್ಕಿಂತ ಹೆಚ್ಚಿನ ಉತ್ಪನ್ನಗಳು ‘ಪೌಷ್ಟಿಕಾಂಶದ ವಿಚಾರದಲ್ಲಿ ಗುರುತಿಸಲಾಗಿರುವ ಮಟ್ಟ ತಲುಪಲು ವಿಫಲವಾಗಿವೆ’ ಎಂದು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಯು ಸೋಮವಾರ ವರದಿ ಮಾಡಿತ್ತು.

‘ತಾನು ಸಿದ್ಧಪಡಿಸುವ ಆಹಾರ ಮತ್ತು ಪಾನೀಯ ಉತ್ಪನ್ನಗಳ ಪೈಕಿ ಶೇ 60ರಷ್ಟಕ್ಕಿಂತ ಹೆಚ್ಚಿನ ಉತ್ಪನ್ನಗಳು ಆರೋಗ್ಯದ ವಿಚಾರದಲ್ಲಿ ಗುರುತಿಸಲಾಗಿರುವ ಮಟ್ಟ ತಲುಪುವುದಿಲ್ಲ ಎಂದು ವಿಶ್ವದ ಅತಿದೊಡ್ಡ ಆಹಾರ ಉತ್ಪನ್ನಗಳ ಕಂಪನಿಯಾದ ನೆಸ್ಲೆ ಒಪ್ಪಿಕೊಂಡಿದೆ. ಅಲ್ಲದೆ, ತಾನು ಎಷ್ಟೇ ಸುಧಾರಣೆ ತಂದರೂ ಕೆಲವು ಉತ್ಪನ್ನಗಳು ಆರೋಗ್ಯಕರ ಆಗುವುದಿಲ್ಲ ಎಂದು ಕಂಪನಿ ಹೇಳಿದೆ’ ಎಂದು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಯು ನೆಸ್ಲೆ ಕಂಪನಿಯ ಕಡತವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕಿಟ್‌ಕ್ಯಾಟ್‌ ಚಾಕಲೇಟ್, ಮ್ಯಾಗಿ ನೂಡಲ್ಸ್ ಹಾಗೂ ನೆಸ್ಕಫೆಯಂತಹ ಜನಪ್ರಿಯ ಉತ್ಪನ್ನಗಳನ್ನು ತಯಾರಿಸುವ ನೆಸ್ಲೆ ಕಂಪನಿಯು ಹೇಳಿಕೆಯೊಂದನ್ನು ಹೊರಡಿಸಿದ್ದು, ‘ಜನರ ಪೌಷ್ಟಿಕಾಂಶದ ಅಗತ್ಯವನ್ನು ನಮ್ಮ ಉತ್ಪನ್ನಗಳು ಪೂರೈಸುವಂತೆ ಆಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಕಂಪನಿಯು ತನ್ನ ಉತ್ಪನ್ನಗಳಲ್ಲಿನ ಸಕ್ಕರೆ ಹಾಗೂ ಸೋಡಿಯಂ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿಯೇ ಶೇ 7ರಷ್ಟು ಕಡಿಮೆ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳಿಗಾಗಿ ಹಾಗೂ ಕುಟುಂಬಗಳಿಗಾಗಿ ಬಿಡುಗಡೆ ಮಾಡಿರುವ ಉತ್ಪನ್ನಗಳು ಅವರ ಬಾಹ್ಯ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸುವಂತೆ ಇವೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ನೆಸ್ಲೆ ಕಂಪನಿಯು ಎಂಟು ಉತ್ಪಾದನಾ ಘಟಕಗಳನ್ನು ಹೊಂದಿದೆ. 2020ರಲ್ಲಿ ಒಟ್ಟು ₹ 13 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ಕಂಪನಿ ಭಾರತದಲ್ಲಿ ಮಾರಾಟ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT