ಸೋಮವಾರ, ಜೂಲೈ 6, 2020
27 °C

ಇಂದು ಸಂಜೆ 4 ಗಂಟೆಗೆ ನಿರ್ಮಲಾ ಭಾಷಣ: ಸಿಗಲಿದೆ ₹20 ಲಕ್ಷ ಕೋಟಿ ಪ್ಯಾಕೇಜ್ ಮಾಹಿತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮೇ 13) ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ್ದ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ನ ವಿವರ ಹಂಚಿಕೊಳ್ಳಲಿದ್ದಾರೆ.

ಮುಂದಿನ ದಿನಗಳಲ್ಲಿ ಹಣಕಾಸು ಇಲಾಖೆ ನಡೆಸಲಿರುವ ಸರಣಿ ಪತ್ರಿಕಾಗೋಷ್ಠಿಗಳ ಪೈಕಿ ಇದು ಮೊದಲನೆಯದು.

ದೇಶವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ್ದ  ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಪಿಡುಗು ಹರಡುವುದನ್ನು ತಡೆಯಲು ಘೋಷಿಸಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಉದ್ಯಮಗಳ ಪುನಶ್ಚೇತನ ಮತ್ತು ಬಡವರಿಗೆ ನೆರವಾಗಲೆಂದು ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದರು. ತಮ್ಮ ಭಾಷಣದಲ್ಲಿಯೇ ಪ್ಯಾಕೇಜ್ ವಿವರಗಳನ್ನು ಹಣಕಾಸು ಸಚಿವರು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.

ಹೊಸ ಪ್ಯಾಕೇಜ್‌ನಲ್ಲಿ ಈ ಹಿಂದೆ ರಿಸರ್ವ್‌ ಬ್ಯಾಂಕ್ ಘೋಷಿಸಿದ್ದ ₹ 1.74 ಲಕ್ಷ ಸಹ ಸೇರಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು.

ಪ್ರಧಾನಿ ಭಾಷಣದ ನಂತರ ಸರಣಿ ಟ್ವೀಟ್ ಮಾಡಿದ್ದ ಹಣಕಾಸು ಸಚಿವರು, ‘ಇದು ಕೇವಲ ಪ್ಯಾಕೇಜ್ ಮಾತ್ರವೇ ಅಲ್ಲ. ಮನಸ್ಥಿತಿಗಳ ಸುಧಾರಣೆಗೆ ಮುನ್ನುಡಿ’ ಎಂದು ಹೇಳಿದ್ದರು.

‘ಪ್ರಧಾನಿ ಘೋಷಿಸಿದ ಆತ್ಮನಿರ್ಭರ ಭಾರತ ಅಭಿಯಾನವು ಬೀದಿ ವ್ಯಾಪಾರಿಗಳು, ವಹಿವಾಟುದಾರರು, ಸಣ್ಣ ಮತ್ತು ಮದ್ಯಮ ಉದ್ಯಮಿಗಳು, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಮಧ್ಯಮ ವರ್ಗ, ತಯಾರಿಕೆದಾರರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳಲಿದೆ. ಸ್ವಾವಲಂಬಿ ಭಾರತವು ಸುಧಾರಣೆಯ ಯತ್ನದಿಂದ ಯಾರನ್ನೂ ಕೈಬಿಡುವುದಿಲ್ಲ’ ಎಂದು ಹೇಳಿದ್ದಾರೆ.

‘ನಾವು ಜನರ ಸಾಮರ್ಥ್ಯ, ಕೌಶಲಗಳನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಹೆಚ್ಚಿಸುತ್ತೇವೆ. ವಿಶ್ವದರ್ಜೆಯ ಸ್ಥಳೀಯ ಬ್ರಾಂಡ್‌ಗಳನ್ನು ರೂಪಿಸುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್ ಟ್ವಿಟರ್‌ನಲ್ಲಿ ಪ್ಯಾಕೇಜ್‌ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು