ಗುರುವಾರ , ಆಗಸ್ಟ್ 22, 2019
26 °C

ಉದ್ಯಮಿಗಳ ಜತೆ ಸಭೆ: ನಿರ್ಮಲಾ ಸೀತಾರಾಮನ್‌

Published:
Updated:

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಪಿಐ) ಪ್ರತಿನಿಧಿಗಳೊಂದಿಗೆ ಶೀಘ್ರವೇ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಎಫ್‌ಪಿಐ ಮೇಲೆ ಸರ್ಚಾರ್ಜ್‌ ವಿಧಿಸಿರುವುದರಿಂದಾಗಿ ದೇಶದ ಷೇರು ಪೇಟೆಗಳಿಂದ ವಿದೇಶಿ ಬಂಡವಾಳ (ಎಫ್‌ಪಿಐ) ಹೊರಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತನು ಚಕ್ರವರ್ತಿ ಅವರು ಎಫ್‌ಪಿಐ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

‘ಹೂಡಿಕೆದಾರರು ಏನನ್ನು ಹೇಳಲು ಬಯಸುತ್ತಾರೋ ಅದನ್ನು ಕೇಳಲು ನಾವು ಸಿದ್ಧರಿದ್ದೇವೆ’ ಎಂದು ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್‌ ಅವರೂ ಹೇಳಿದ್ದಾರೆ.

ಸರಣಿ ಸಭೆಗೆ ನಿರ್ಧಾರ: ‘ಕೈಗಾರಿಕೆ ಮತ್ತು ಉದ್ಯಮದ ವಿವಿಧ ವಲಯಗಳ ಪ್ರತಿನಿಧಿಗಳ ಜತೆ ಈ ವಾರ ಸರಣಿ ಸಭೆ ನಡೆಸಿ, ಅವುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ನಿರ್ಮಲಾ ತಿಳಿಸಿದ್ದಾರೆ.

‘ಕಿರು, ಸಣ್ಣ ಮತ್ತು ಮಧ್ಯಮ ಪ್ರಮಣದ ಉದ್ಯಮಗಳು (ಎಂಎಸ್‌ಎಂಇ), ವಾಹನ ತಯಾರಿಕೆ, ಷೇರುಪೇಟೆ, ರಿಯಲ್‌ ಎಸ್ಟೇಟ್‌, ವಿವಿಧ ವಾಣಿಜ್ಯೋದ್ಯಮ ಸಂಘಟನೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪ್ರಮುಖ ವಲಯಗಳು ಕುಂಠಿತ ಪ್ರಗತಿ ಕಾಣುತ್ತಿವೆ. ಜಾಗತಿಕ ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕ ವೃದ್ಧಿ ದರದ ಮುನ್ನೋಟ ತಗ್ಗಿಸಿವೆ. ಷೇರುಪೇಟೆ ಸೂಚ್ಯಂಕ ನಿರಂತರಕುಸಿತ ದಾಖಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಅವರ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.

Post Comments (+)