ಶುಕ್ರವಾರ, ಜೂನ್ 18, 2021
23 °C

ಮೂಲಸೌಕರ್ಯದಲ್ಲಿ ಎಫ್‌ಡಿಐ ಆಕರ್ಷಿಸಲು ಕ್ರಮ: ಸಚಿವ ನಿತಿನ್ ಗಡ್ಕರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19ನಿಂದ ಎದುರಾಗಿರುವ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಮೂಲಸೌಕರ್ಯ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಮೂಲಸೌಕರ್ಯ ವಲಯದಲ್ಲಿ ಶೇಕಡ 100ರಷ್ಟು ಎಫ್‌ಡಿಐಗೆ ಅವಕಾಶವಿದೆ. ವಿಮಾ ನಿಧಿ ಮತ್ತು ಪಿಂಚಣಿ ನಿಧಿಗಳಲ್ಲಿಯೂ ಶೇ 100ರಷ್ಟು ಎಫ್‌ಡಿಐಗೆ ಪ್ರಯತ್ನ ನಡೆಯುತ್ತಿದೆ. ಈ ಕುರಿತು ವಿಶ್ವಬ್ಯಾಂಕ್‌ ಮತ್ತು ಎಡಿಬಿ ಜತೆಗೆ ಮಾತುಕತೆ ನಡೆಯುತ್ತಿದೆ ಎಂದು ‘ಭಾರತದಲ್ಲಿ ರಸ್ತೆ ಅಭಿವೃದ್ಧಿ’ ವಿಷಯದ ಕುರಿತಾದ ವೆಬಿನಾರ್‌ನಲ್ಲಿ ಅವರು ಹೇಳಿದ್ದಾರೆ.

ಕೋವಿಡ್‌ ಪರಿಣಾಮಗಳಿಗೆ ಒಳಗಾಗಿರುವ ಆರ್ಥಿಕತೆಯು ಬಹಳ ನಿರ್ಣಾಯಕ ಹಂತದಲ್ಲಿ ಸಾಗುತ್ತಿದೆ. ಈ ಹಂತದಲ್ಲಿ ಹಣದ ಅಗತ್ಯವಿದೆ. ಇದಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಖಾಸಗಿ ವಲಯಕ್ಕೆ ಮನವಿ ಮಾಡಿದ್ದಾರೆ.

ಜಗತ್ತೇ ಹೂಡಿಕೆಗಾಗಿ ಭಾರತದತ್ತ ಮುಖಮಾಡಿದೆ. ಇಂತಹ ಸಂದರ್ಭದಲ್ಲಿ ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಹೆದ್ದಾರಿ, ವಿದ್ಯುತ್‌, ಸಾರಿಗೆ, ಜಲಸಂಪನ್ಮೂಲ, ಸಂವಹನ ಮತ್ತು ಇತರೆ ವಲಯಗಳಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಮೂಲಸೌಕರ್ಯ ವಲಯಕ್ಕೆ ಉತ್ತೇಜನ ದೊರೆಯದ ಹೊರತು ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

‘ಇಂಧನ ಮತ್ತು ವಿದ್ಯುತ್‌ಗೆ ಇರುವ ಪರ್ಯಾಯ ವ್ಯವಸ್ಥೆ ಸಾಕಷ್ಟು ಸಮರ್ಥವಾಗಿದೆ. ನಾನೊಂದು ಎಲೆಕ್ಟ್ರಿಕ್‌ ಎಸ್‌ಯುವಿ ಖರೀದಿಸಿದೆ. ಪೆಟ್ರೋಲ್‌ ವೆಚ್ಚವು ತಿಂಗಳಿಗೆ ₹ 12 ಸಾವಿರದಿಂದ ₹ 13 ಸಾವಿರ ಬೇಕಾಗುತ್ತಿತ್ತು. ಈಗ ಕಾರಿಗಾಗಿ ಖರ್ಚು ಮಾಡುವ ವಿದ್ಯುತ್ತಿನ ಬಿಲ್ ₹ 600–₹ 800 ಬರುತ್ತಿದೆ’ ಎಂದು ಅವರು ಹೇಳಿದ್ದಾರೆ.

***

ಎರಡು ವರ್ಷಗಳಲ್ಲಿ ₹ 15 ಲಕ್ಷ ಕೋಟಿ ಮೌಲ್ಯದ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ

- ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು