ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ ಅಂತ್ಯಕ್ಕೆ ಈರುಳ್ಳಿ ಬೆಲೆ ಏರಿಕೆ?

ಕ್ರಿಸಿಲ್ ಸಂಸ್ಥೆಯ ಅಧ್ಯಯನ ವರದಿ ಅಂದಾಜು
Published 4 ಆಗಸ್ಟ್ 2023, 16:14 IST
Last Updated 4 ಆಗಸ್ಟ್ 2023, 16:14 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆಗಸ್ಟ್‌ ತಿಂಗಳ ಕೊನೆಯಲ್ಲಿ ದೇಶದ ರಿಟೇಲ್‌ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳ ಶುರುವಾಗಲಿದ್ದು, ಬೆಲೆಯು ಕೆ.ಜಿ.ಗೆ ₹60ರಿಂದ ₹70ರವರೆಗೆ ಏರಿಕೆ ಕಾಣಲಿದೆ ಎಂದು ಕ್ರಿಸಿಲ್‌ ಸಂಸ್ಥೆಯ ಅಧ್ಯಯನ ವರದಿಯೊಂದು ಹೇಳಿದೆ. ಪೂರೈಕೆಯ ಕೊರತೆಯು ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಅದು ಹೇಳಿದೆ.

ಆದರೆ, ಈರುಳ್ಳಿ ಬೆಲೆಯು 2020ರಲ್ಲಿ ಕಂಡಿದ್ದ ಗರಿಷ್ಠ ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ಅಂದಾಜು ಮಾಡಿದೆ.

‘ಈರುಳ್ಳಿಯ ಪೂರೈಕೆ ಮತ್ತು ಬೇಡಿಕೆಯಲ್ಲಿನ ಅಸಮತೋಲನವು, ಆಗಸ್ಟ್‌ ತಿಂಗಳ ಕೊನೆಯ ವೇಳೆಗೆ ಬೆಲೆ ಏರಿಕೆಯ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ನಾವು ತಳಮಟ್ಟದಲ್ಲಿ ನಡೆಸಿದ ಮಾತುಕತೆಗಳ ಪ್ರಕಾರ ರಿಟೇಲ್ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್‌ ಆರಂಭದಿಂದ ಬೆಲೆಯು ಗಮನಾರ್ಹವಾಗಿ ಹೆಚ್ಚಳ ಆಗಲಿದೆ. ಬೆಲೆಯು ₹70ರವರೆಗೂ ತಲುಪಬಹುದು’ ಎಂದು ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಆ್ಯಂಡ್ ಅನಾಲಿಟಿಕ್ಸ್ ಸಿದ್ಧಪಡಿಸಿರುವ ವರದಿಯು ಹೇಳಿದೆ.

ಹಿಂಗಾರು ಹಂಗಾಮಿನ ಈರುಳ್ಳಿ ಹೆಚ್ಚು ಕಾಲ ಬಾಳಿಕೆ ಬರದಿರುವುದು ಹಾಗೂ ಈ ವರ್ಷದ ಫೆಬ್ರುವರಿ–ಮಾರ್ಚ್ ಅವಧಿಯಲ್ಲಿ ಈರುಳ್ಳಿಯನ್ನು ವಿಪರೀತ ಪ್ರಮಾಣದಲ್ಲಿ ಮಾರಾಟ ಮಾಡಿದ್ದ ಕಾರಣದಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಹಿಂಗಾರು ಬೆಳೆಯ ಸಂಗ್ರಹವು ಆಗಸ್ಟ್‌ ಕೊನೆಯಲ್ಲಿ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ವಿವರಿಸಿದೆ.

ಮುಂಗಾರು ಅವಧಿಯ ಈರುಳ್ಳಿ ಬೆಳೆಯು ಅಕ್ಟೋಬರ್‌ನಿಂದ ಮಾರುಕಟ್ಟೆಗೆ ಬರಲಿದೆ. ಆಗ ಬೆಲೆಯಲ್ಲಿ ಇಳಿಕೆ ಕಂಡುಬರಲಿದೆ. ಹಬ್ಬಗಳ ಋತುವಿನಲ್ಲಿ (ಅಕ್ಟೋಬರ್–ಡಿಸೆಂಬರ್ ಅವಧಿ) ಬೆಲೆಯಲ್ಲಿನ ಏರಿಳಿತವು ಸ್ಥಿರತೆಯ ಹಂತವನ್ನು ತಲುಪುವ ನಿರೀಕ್ಷೆ ಇದೆ.

ಈ ವರ್ಷದ ಜನವರಿ–ಮೇ ಅವಧಿಯಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗಿದ್ದ ಕಾರಣ ಗ್ರಾಹಕರಿಗೆ ಹೊರೆ ತುಸು ಕಡಿಮೆ ಆಗಿತ್ತು. ಆದರೆ ಇದರ ಪರಿಣಾಮವಾಗಿ ಮುಂಗಾರು ಅವಧಿಯಲ್ಲಿ ರೈತರು ಈರುಳ್ಳಿ ಬೆಳೆಯುವ ಪ್ರಮಾಣ ಕಡಿಮೆ ಆಯಿತು.

‘ಹೀಗಾಗಿ ಮುಂಗಾರು ಹಂಗಾಮಿನ ಈರುಳ್ಳಿ ಬೆಳೆ ಪ್ರಮಾಣವು ಹಿಂದಿನ ವರ್ಷದ ಪ್ರಮಾಣಕ್ಕೆ ಹೋಲಿಸಿದರೆ ಶೇಕಡ 5ರಷ್ಟು ಕಡಿಮೆ ಆಗಬಹುದು ಎಂಬುದು ನಮ್ಮ ನಿರೀಕ್ಷೆ. ಈರುಳ್ಳಿಯ ವಾರ್ಷಿಕ ಉತ್ಪಾದನೆಯು 2.9 ಕೋಟಿ ಟನ್ ಆಗಿರಲಿದೆ. ಇದು ಕಳೆದ ಐದು ವರ್ಷಗಳ ಸರಾಸರಿಗಿಂತ ಶೇ 7ರಷ್ಟು ಜಾಸ್ತಿ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನು ಪರಿಗಣಿಸಿದರೆ ಈ ವರ್ಷದಲ್ಲಿ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆ ಎದುರಾಗಲಿಕ್ಕಿಲ್ಲ. ಆದರೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಮಳೆಯ ಪ್ರಮಾಣವು ಈರುಳ್ಳಿ ಬೆಳೆಯ ಪ್ರಮಾಣ ಯಾವ ಮಟ್ಟದಲ್ಲಿ ಇರಲಿದೆ ಎಂಬುದನ್ನು ತೀರ್ಮಾನಿಸಲಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT