ಮಂಗಳವಾರ, ಡಿಸೆಂಬರ್ 7, 2021
24 °C

‘ಜಿಎಸ್‌ಟಿ ಪರಿಹಾರ ವಿಸ್ತರಿಸಿ’; ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಿಎಸ್‌ಟಿ ಪರಿಹಾರವನ್ನು 2022ರ ಜೂನ್‌ ಬಳಿಕವೂ ವಿಸ್ತರಿಸುವಂತೆ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಹಣಕಾಸು ಸಚಿವರು ಜಿಎಸ್‌ಟಿ ಮಂಡಳಿಯ ಎದುರು ಬೇಡಿಕೆ ಇಟ್ಟಿದ್ದಾರೆ.

ಲಖನೌದಲ್ಲಿ ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳಿಗೆ ಆಗುವ ವರಮಾನ ಕೊರತೆ ತುಂಬಿಕೊಡಲು ನೀಡುವ ಪರಿಹಾರವು 2022ರ ಜೂನ್‌ಗೆ ಅಂತ್ಯಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಆದರೆ, ಐಷಾರಾಮಿ ಸರಕುಗಳ ಮೇಲಿನ ವಿಧಿಸುವ ಪರಿಹಾರ ಸೆಸ್‌ನ್ನು 2026ರ ಮಾರ್ಚ್‌ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪರಿಹಾರ ವ್ಯವಸ್ಥೆಯು ಮುಂದುವರಿಯಬೇಕು ಎಂದು ತಮಿಳುನಾಡು ಹಣಕಾಸು ಸಚಿವ ಪಿ. ತ್ಯಾಗರಾಜನ್‌ ಬೇಡಿಕೆ ಇಟ್ಟಿದ್ದಾರೆ. ಈ ವಿಷಯದ ಕುರಿತಾದ ನಿರ್ಧಾರವನ್ನು ಮುಂದೂಡುವಂತೆ ಸಭೆಯಲ್ಲಿ ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ತೀವ್ರವಾದ ವರಮಾನ ಕೊರತೆ ಎದುರಿಸುತ್ತಿದೆ. ಹೀಗಾಗಿ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸುವಂತೆ ಕೇರಳ ಹಣಕಾಸು ಸಚಿವ ಕೆ.ಎನ್‌. ಬಾಲಗೋಪಾಲನ್‌ ಅವರು ಶನಿವಾರ ಒತ್ತಾಯಿಸಿದ್ದಾರೆ.

ಒಂದೊಮ್ಮೆ ಪರಿಹಾರ ವ್ಯವಸ್ಥೆಯನ್ನು ಮುಂದಿನ ವರ್ಷಕ್ಕೆ ನಿಲ್ಲಿಸಿದರೆ ರಾಜ್ಯವು ಇನ್ನಷ್ಟು ವರಮಾನ ಕೊರತೆ ಎದುರಿಸಬೇಕಾಗಿ ಬರಲಿದೆ. ಆದ್ದರಿಂದ ವಿಸ್ತರಣೆ ಆಗುವ ಭರವಸೆ ಇದೆ ಎಂದು ಹೇಳಿದ್ದಾರೆ.

ಪರಿಹಾರ ಸೆಸ್‌ ವಿಷಯವನ್ನು ‍ಪರಿಶೀಲಿಸಲು ಸಚಿವರುಗಳ ತಂಡಕ್ಕೆ ನೀಡಬಹುದು ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನಿಶ್‌ ಸಿಸೋಡಿಯಾ ಸಲಹೆ ನೀಡಿದ್ದಾರೆ.

ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರ ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 2.59 ಲಕ್ಷ ಕೋಟಿಗಳಷ್ಟಾಗಲಿದೆ ಎಂದು ಕೇಂದ್ರವು ಅಂದಾಜು ಮಾಡಿದೆ. ಇದರಲ್ಲಿ ₹ 1.59 ಲಕ್ಷ ಕೋಟಿ ಮೊತ್ತವನ್ನು ಈ ವರ್ಷ ಸಾಲ ಪಡೆಯಬೇಕಿದೆ. ಹಿಂದಿನ ಹಣಕಾಸು ವರ್ಷದಲ್ಲಿಯೂ ಕೇಂದ್ರವು ಸಾಲ ಪಡೆದು ರಾಜ್ಯಗಳಿಗೆ ₹ 1.10 ಲಕ್ಷ ಕೋಟಿಗಳಷ್ಟು ಜಿಎಸ್‌ಟಿ ಪರಿಹಾರ ಮೊತ್ತ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು