ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಯ ದೇಶಗಳ ಎಫ್‌ಡಿಐ ಪ್ರಸ್ತಾವ ಅರ್ಧದಷ್ಟು ವಿಲೇವಾರಿ

ಭಾರತಕ್ಕೆ ₹1 ಲಕ್ಷ ಕೋಟಿ ಮೌಲ್ಯದ ಪ್ರಸ್ತಾವನೆ
Published 3 ಡಿಸೆಂಬರ್ 2023, 15:58 IST
Last Updated 3 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ನವದೆಹಲಿ: ಭಾರತದೊಂದಿಗೆ ಭೂ ಗಡಿ ಹಂಚಿಕೊಂಡಿರುವ ದೇಶಗಳಿಂದ ಏಪ್ರಿಲ್ 2020ರಿಂದ ಇಲ್ಲಿಯವರಗೆ ಸುಮಾರು ₹ 1 ಲಕ್ಷ ಕೋಟಿ  ಮೌಲ್ಯದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಸ್ತಾವಗಳನ್ನು ಸರ್ಕಾರ ಸ್ವೀಕರಿಸಿದೆ ಮತ್ತು ಅವುಗಳಲ್ಲಿ ಅರ್ಧದಷ್ಟು ಅರ್ಜಿಗಳನ್ನು ಇದುವರೆಗೆ ವಿಲೇವಾರಿ ಮಾಡಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 2020ರಲ್ಲಿ, ದೇಶಿಯ ಸಂಸ್ಥೆಗಳ ಅವಕಾಶವಾದಿ ಸ್ವಾಧೀನವನ್ನು ತಡೆಯಲು ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳಿಂದ ವಿದೇಶಿ ಹೂಡಿಕೆಗಳಿಗೆ ಕೇಂದ್ರವು ತನ್ನ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಿತು.

ಭಾರತವು, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್‌, ನೇಪಾಳ, ಮ್ಯಾನ್ಮಾರ್‌ ಮತ್ತು ಅಫ್ಗಾನಿಸ್ತಾನದೊಂದಿಗೆ ಭೂ ಗಡಿಯನ್ನು ಹೊಂದಿದೆ. ಸರ್ಕಾರದ ಈ ನಿರ್ಧಾರದಂತೆ, ಈ ಎಲ್ಲ ದೇಶಗಳಿಗೆ ಭಾರತದಲ್ಲಿ ಯಾವುದೇ ವಲಯದಲ್ಲಿ ಹೂಡಿಕೆ ಮಾಡಲು ಸರ್ಕಾರದ ಅನುಮೋದನೆ ಅಗತ್ಯವಿದೆ.

’ಸುಮಾರು ₹1 ಲಕ್ಷ ಕೋಟಿ ಮೌಲ್ಯದ ಪ್ರಸ್ತಾವಗಳು ಬಂದಿದ್ದು, ಅದರಲ್ಲಿ ಶೇ 50ರಷ್ಟು ವಿಲೇವಾರಿ ಮಾಡಲಾಗಿದೆ. ಉಳಿದವುಗಳು ಬಾಕಿ ಉಳಿದಿವೆ ಅಥವಾ ಹಿಂತೆಗೆದುಕೊಳ್ಳಲಾಗಿದೆ ಅಥವಾ ತಿರಸ್ಕರಿಸಲಾಗಿದೆ. ಹಾಗಾಗಿ ಎಫ್‌ಡಿಐ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿಲ್ಲ. ಎಫ್‌ಡಿಐ ಪ್ರಸ್ತಾವಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ನಮ್ಮ ಉತ್ಪಾದನಾ ಸಾಮರ್ಥ್ಯಗಳಿಗೆ ಮೌಲ್ಯವನ್ನು ಸೇರಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ‘ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬಾಕಿ ಇರುವ ಪ್ರಸ್ತಾವಗಳು ಭದ್ರತಾ ಏಜೆನ್ಸಿಗಳು ಮತ್ತು ಕೆಲವು ಸಚಿವಾಲಯಗಳಲ್ಲಿವೆ. ಹಿಂತೆಗೆದುಕೊಳ್ಳಲಾದ ಪ್ರಸ್ತಾಪಗಳ ಸಂಖ್ಯೆಯು ಬಹಳ ದೊಡ್ಡದಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ಈ ಪ್ರಸ್ತಾವನೆಗಳನ್ನು ಪರಿಶೀಲಿಸಲು ಅಂತರ್‌ ಸಚಿವಾಲಯ ಸಮಿತಿ ರಚಿಸಿದೆ. ಈ ಪ್ರಸ್ತಾವಗಳು ಭಾರಿ ಯಂತ್ರೋಪಕರಣ, ಆಟೊಮೊಬೈಲ್‌, ಆಟೊ ಘಟಕಗಳ ತಯಾರಿಕೆ, ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌, ವ್ಯಾಪಾರ, ಇ–ಕಾಮರ್ಸ್‌ ಮತ್ತು ಎಂಜಿನಿಯರಿಂಗ್‌ ಮತ್ತು ಎಲೆಕ್ಟ್ರಿಕಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಪ್ರಸ್ತಾವನೆ ಬಂದಿದೆ. 

ಇವುಗಳಲ್ಲಿ ಹೆಚ್ಚು ಅರ್ಜಿಗಳು ಚೀನಾದಿಂದ ಬಂದಿವೆ. ನಂತರ ನೇಪಾಳ, ಭೂತಾನ್‌ ಮತ್ತು ಬಾಂಗ್ಲಾದೇಶ ಕೂಡ ತಮ್ಮ ಅರ್ಜಿಗಳನ್ನು ಸಲ್ಲಿಸಿವೆ. 2020ರ ಏಪ್ರಿಲ್‌ನಿಂದ 2023ರ ಸೆಪ್ಟೆಂಬರ್‌ ಅವಧಿಯಲ್ಲಿ ಭಾರತವು ಚೀನಾದಿಂದ ₹20 ಸಾವಿರ ಕೋಟಿ ಎಫ್‌ಡಿಐ ಸ್ವೀಕರಿಸಿದೆ. ಬಾಂಗ್ಲಾದೇಶದಿಂದ ₹66 ಲಕ್ಷ, ನೇಪಾಳದಿಂದ ₹37 ಕೋಟಿ, ಮ್ಯಾನ್ಮಾರ್‌ದಿಂದ ₹74 ಕೋಟಿ ಮತ್ತು ಅಫಘಾನಿಸ್ತಾನದಿಂದ ₹21 ಕೋಟಿ ಹೂಡಿಕೆ ಸ್ವೀಕರಿಸಿದೆ.

ಚೀನಾದ ಅತಿದೊಡ್ಡ ವಾಹನ ತಯಾರಕ ಎಸ್‌ಎಐಸಿ ಮೋಟರ್ ಕಳೆದ ತಿಂಗಳು ಜೆಎಸ್‌ಡಬ್ಲ್ಯು ಗ್ರೂಪ್‌ನೊಂದಿಗೆ ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT