ನವದೆಹಲಿ: ಜುಲೈ ತಿಂಗಳಲ್ಲಿ ತಾಳೆ ಎಣ್ಣೆ ಆಮದು ಪ್ರಮಾಣವು ಇಳಿಕೆಯಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಬುಧವಾರ ತಿಳಿಸಿದೆ.
ಬಂದರುಗಳಲ್ಲಿ ಹೆಚ್ಚಿದ ಸಂಚಾರ ದಟ್ಟಣೆ ಮತ್ತು ಹಡಗುಗಳ ಪ್ರಯಾಣ ಅವಧಿಯಲ್ಲಿನ 8–10 ದಿನದ ವಿಳಂಬದಿಂದಾಗಿ ಆಮದು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷದ ಜುಲೈನಲ್ಲಿ 10.86 ಲಕ್ಷ ಟನ್ ತಾಳೆ ಎಣ್ಣೆ ಆಮದಾಗಿತ್ತು. ಈ ಜುಲೈನಲ್ಲಿ 10.81 ಲಕ್ಷ ಟನ್‌ಗೆ ಇಳಿದಿದೆ. 18.95 ಲಕ್ಷ ಟನ್‌ನಷ್ಟು ಸಸ್ಯಜನ್ಯ ತೈಲ ಆಮದಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 17.71 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದೆ.
ಆರ್‌ಬಿಡಿ ಪಾಮೋಲಿನ್ ಆಮದು ಪ್ರಮಾಣವು ಕಳೆದ ವರ್ಷದ ಜುಲೈನಲ್ಲಿ 2.37 ಲಕ್ಷ ಟನ್‌ನಷ್ಟಿತ್ತು. ಈ ಜುಲೈನಲ್ಲಿ 1.36 ಲಕ್ಷ ಟನ್‌ಗೆ ಇಳಿಕೆಯಾಗಿದೆ.
ಕಚ್ಚಾ ತಾಳೆ ಎಣ್ಣೆ 9.36 ಲಕ್ಷ ಟನ್, ಕಚ್ಚಾ ಪಾಮ್ ಕೆರ್ನಲ್ ಎಣ್ಣೆ 8,001 ಟನ್, ಸೂರ್ಯಕಾಂತಿ ಎಣ್ಣೆ 3.66 ಲಕ್ಷ ಟನ್ ಮತ್ತು ಸೋಯಾಬಿನ್ ಎಣ್ಣೆ 3.91 ಲಕ್ಷ ಟನ್ ಆಮದಾಗಿದೆ.