ಬುಧವಾರ, ಮಾರ್ಚ್ 29, 2023
23 °C
ಕೇಂದ್ರ, ರಾಜ್ಯ ಸರ್ಕಾರಗಳಿಗೆ ಪರಿಸರ ಸಂಘಟನೆಗಳ ಪ್ರಮುಖರ ಹಕ್ಕೊತ್ತಾಯ

ಕೈಗಾ ಘಟಕ ವಿಸ್ತರಣೆ ಬೇಡವೇ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ಕೈಗಾ ಅಣುಸ್ಥಾವರದಲ್ಲಿ ಪ್ರಸ್ತಾವಿತ 5– 6ನೇ ಘಟಕ ಸ್ಥಾಪನೆ ವಿರೋಧಿಸಿ, ವಿವಿಧ ಪರಿಸರ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಾಡಿವೆ.

ಈ ಸಂಬಂಧ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ, ಬೆಂಗಳೂರು ಅವಿನಾಶ ಸಂಸ್ಥೆ ಮುಖ್ಯಸ್ಥ ವೈ.ಬಿ.ರಾಮಕೃಷ್ಣ, ಪರಿಸರ ಬರಹಗಾರ ನಾಗೇಶ ಹೆಗಡೆ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಷ್ಣು ಕಾಮತ್, ಇಂಧನ ತಜ್ಞ ಶಂಕರ ಶರ್ಮಾ, ಪಶ್ಚಿಮಘಟ್ಟ ಉಳಿಸಿ ಆಂದೋಲನದ ಮುಖಂಡ ಪ್ರೊ.ಬಿ.ಎಂ. ಕುಮಾರಸ್ವಾಮಿ, ಸಸ್ಯ ಶಾಸ್ತ್ರಜ್ಞ ಕೇಶವ ಕೊರ್ಸೆ, ಜಿಲ್ಲಾ ಪರಿಸರ ಸಮಿತಿ ಉಪಾಧ್ಯಕ್ಷೆ ವಾಸಂತಿ ಹೆಗಡೆ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖ ನಾರಾಯಣ ಗಡೀಕೈ, ಪರಿಸರ ಕಾನೂನು ಅಧ್ಯಯನ ಕೇಂದ್ರದ ಪ್ರಮುಖ ಡಾ.ಮಹಾಬಲೇಶ್ವರ ಅವರು, ಅಣುಸ್ಥಾವರ ಘಟಕ ವಿಸ್ತರಣೆ ವಿರೋಧಿಸುವ ಕಾರಣಗಳನ್ನು ನೀಡಿ, ಜಂಟಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

* ಕೈಗಾ ಸುತ್ತಮುತ್ತಲಿನ ಜನರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಕೈಗಾ ಸುತ್ತಮುತ್ತಲ ಗಾಳಿ, ನೀರು, ಜಲಚರ, ಸಸ್ಯಗಳು ವಿಕಿರಣಯುಕ್ತವಾಗಿದ್ದು, ಅವನ್ನು ಸೇವಿಸುವ ಜನರ ಪರಿಸ್ಥಿತಿ ಏನು ಎಂಬುದರ ಕುರಿತು ನೈಜ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಮುಂಬೈ ಟಾಟಾ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸುತ್ತಿದೆ ಎನ್ನಲಾಗುವ ವರದಿಯನ್ನೂ ಸಾರ್ವಜನಿಕರಿಗೆ ನೀಡಲಾಗುತ್ತಿಲ್ಲ.

* ಕೈಗಾ ಘಟಕಗಳು ಕಾಳಿ ನದಿ ನೀರನ್ನು ಬಳಸಿಕೊಂಡು, ಪುನಃ ಆ ನೀರನ್ನು ನದಿಗೆ ಬಿಡುತ್ತವೆ. ವಿಕಿರಣಯುಕ್ತ ಈ ನೀರು ಕಾಳಿ ನದಿಯ ಮತ್ತು ಕಾರವಾರದ ಸಮುದ್ರದಲ್ಲಿ ಸಿಗುವ ಮೀನು, ಏಡಿ, ಸೀಗಡಿ, ಬೆಳಚಿನಂತಹ ಜಲಚರಗಳ ದೇಹವನ್ನು ಸೇರುತ್ತಿವೆ. ಈ ಮೀನನ್ನು ಸೇವಿಸುವ ಜನರ ಆರೋಗ್ಯ ಏನಾಗುತ್ತಿದೆ ಎಂಬ ಕುರಿತು ಯಾರೂ ಮಾಹಿತಿ ನೀಡುತ್ತಿಲ್ಲ.

* ಕೈಗಾ ಪ್ರದೇಶವು ಅಮೂಲ್ಯ ಕಾಡಿರುವ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ. ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯವೇ ಇದನ್ನು ಪರಿಸರ ಸೂಕ್ಷ್ಮಪ್ರದೇಶವೆಂದು ಘೋಷಿಸಿ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಇಂಥ ಕಡೆ ಅಣುವಿದ್ಯುತ್ ಘಟಕ ಸ್ಥಾಪಿಸಿರುವುದೇ ತಪ್ಪು. ಮತ್ತೆ ಮುಂದಿನ ವಿಸ್ತರಣೆ ಬೇಡವೇ ಬೇಡ.

* ಕದ್ರಾದಿಂದ ಅಪಾರ ಪ್ರಮಾಣದಲ್ಲಿ ಕಾಳಿ ನೀರನ್ನು ಈಗಾಗಲೇ ಕೈಗಾ ಘಟಕಗಳು ಬಳಸುತ್ತಿವೆ. ಹೊಸ ಘಟಕಗಳು ಮತ್ತಷ್ತು ಹೆಚ್ಚು ನೀರನ್ನು ಬಳಸುತ್ತವೆ. ಇದರಿಂದ ಕಾಳಿ ನದಿಯಲ್ಲಿ ನೈಸರ್ಗಿಕ ನೀರಿನ ಹರಿವು ಮತ್ತಷ್ಟು ಕಡಿಮೆಯಾಗುತ್ತದೆ.

ಮಡಿಲಲ್ಲಿನ ಕೆಂಡ

ಅಣು ವಿದ್ಯುತ್ ಉತ್ಪಾದನೆಯಿಂದ ಹೊರಬೀಳುವ ಅಣುತ್ಯಾಜ್ಯವು ಲಕ್ಷಾಂತರ ವರ್ಷಗಳವರೆಗೂ ವಿಕಿರಣವನ್ನು ಹೊರಸೂಸುತ್ತಿರುತ್ತದೆ. ಈ ಅಣುತ್ಯಾಜ್ಯವನ್ನು ಎಷ್ಟು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿದೆ ಅಥವಾ ಸಂಗ್ರಹಿಸಿ ಇಡಲಾಗುತ್ತಿದೆಯೆಂದು ಯಾರಿಗೂ ತಿಳಿದಿಲ್ಲ. ಇದು ಮಡಿಲಲ್ಲಿ ಕಟ್ಟಿಕೊಂಡಿರುವ ಕೆಂಡ. ಹೀಗಾಗಿ, ಐದು ಮತ್ತು ಆರನೇ ಘಟಕಗಳ ಸ್ಥಾಪನೆ ಬೇಡವೇ ಬೇಡ ಎಂದು ಪರಿಸರ ಸಂಘಟನೆಗಳು ಪ್ರಮುಖರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು