ಭಾನುವಾರ, ಜೂಲೈ 5, 2020
28 °C

ಕೊರೊನಾ: ದುರಿತ ಕಾಲದಲ್ಲಿ ಆರೋಗ್ಯಕ್ಕಿಂತ ಆರ್ಥಿಕ ಬಿಕ್ಕಟ್ಟಿಗೆ ಹೆಚ್ಚು ಚಿಂತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಾಣು ಪಿಡುಗಿನಿಂದ ಉದ್ಭವಿಸಿರುವ ಆರೋಗ್ಯ ಸಮಸ್ಯೆಗಳಿಗಿಂತ ಆರ್ಥಿಕ ಬಿಕ್ಕಟ್ಟಿನ ಬಗ್ಗೆಯೇ ಹೆಚ್ಚು ಜನರು ಆತಂಕಗೊಂಡಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಲಖನೌದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್ (ಐಐಎಂ) ನಡೆಸಿದ ದೇಶವ್ಯಾಪಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಬಹುತೇಕರಲ್ಲಿ (ಶೇ 79) ಭಯ ಮತ್ತು ನಿರಾಶೆ ಮನೆಮಾಡಿದೆ. 23 ರಾಜ್ಯಗಳ 104 ನಗರವಾಸಿಗಳನ್ನು ಆನ್‌ಲೈನ್‌ ಮತ್ತು ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್‌, ಲಿಂಕ್ಡ್‌ಇನ್‌ ಮೂಲಕ ಸಂಪರ್ಕಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಈ ಬಿಕ್ಕಟ್ಟಿನ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಚಿಂತಿತರಾದವರ ಸಂಖ್ಯೆಯೇ ಹೆಚ್ಚಿಗೆ ಇದೆ. ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಜನರು ಹೊಣೆಗಾರಿಕೆಯಿಂದ ವರ್ತಿಸದ ಬಗ್ಗೆಯೂ ಹೆಚ್ಚಿನವರು ಚಿಂತಿತರಾಗಿದ್ದಾರೆ.

ಕೋವಿಡ್‌ ಪಿಡುಗಿನ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ  ಶೇ 32 ಜನರು ಚಿಂತಿತರಾಗಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲವರು ಬೇಜವಾಬ್ದಾರಿಯಿಂದ ವರ್ತಿಸಿದ ಬಗ್ಗೆ ಶೇ 15ರಷ್ಟು ಜನರು ಆತಂಕ ದಾಖಲಿಸಿದ್ದಾರೆ. ಭವಿಷ್ಯದ ಅನಿಶ್ಚಿತತೆ ಬಗ್ಗೆ ಶೇ 16ರಷ್ಟು ಜನರು ಕಳವಳಗೊಂಡಿದ್ದಾರೆ.

ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟು ಎಷ್ಟು ದಿನಗಳವರೆಗೆ ಮುಂದುವರೆಯಲಿದೆ ಎನ್ನುವುದರ ಬಗೆಗಿನ ಅನಿಶ್ಚಿತತೆ ಕುರಿತು ಹೆಚ್ಚಿನವರು ಆತಂಕ ಹಂಚಿಕೊಂಡಿದ್ದಾರೆ. ಸೋಂಕಿಗೆ ಒಳಗಾಗುವುದರ ಬಗ್ಗೆ ಶೇ 14ರಷ್ಟು ಜನರು ಮಾತ್ರ ಚಿಂತಿತರಾಗಿದ್ದಾರೆ. ಆರ್ಥಿಕ ಬಿಕ್ಕಟ್ಟು ತಂದೊಡ್ಡಿರುವ ಸಂಕಷ್ಟದ ಬಗ್ಗೆಯೇ ಹೆಚ್ಚಿನವರು ಆತಂಕಗೊಂಡಿದ್ದಾರೆ.

ಈ ಪಿಡುಗಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಐದು ಜನರಲ್ಲಿ ಮೂವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸಮರ್ಥ ನಾಯಕತ್ವವನ್ನು ಶೇ 19 ಜನರು ಶ್ಲಾಘಿಸಿದ್ದಾರೆ. 

ಹೆಚ್ಚಿದ ವಿಶ್ವಾಸ: ಲಾಕ್‌ಡೌನ್‌ 2.0 ವೇಳೆಗೆ ಆರೋಗ್ಯ ಮೂಲ ಸೌಕರ್ಯಗಳು ಸುಧಾರಣೆಯಾದ  ಬಗ್ಗೆ ಜನರಲ್ಲಿ ಹೆಚ್ಚಿನ ವಿಶ್ವಾಸ ಮೂಡಿತ್ತು.  ಮುಖಗವಸು, ಪಿಪಿಇ ಕಿಟ್‌ ಲಭ್ಯತೆಯಲ್ಲಿ ಸುಧಾರಣೆಯಾಗಿರುವ ಬಗ್ಗೆ ಹೆಚ್ಚಿನವರು ಸಂತೃಪ್ತಿ ದಾಖಲಿಸಿದ್ದಾರೆ.

ಲಾಕ್‌ಡೌನ್‌ಗೆ ಜನರು ಸಹಕರಿಸಿರುವುದಕ್ಕೆ ಶೇ 29ರಷ್ಟು ಜನರು ಉತ್ತಮ ಅಭಿಪ್ರಾಯ ಹೊಂದಿದ್ದಾರೆ.  ಕೋವಿಡ್‌ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ಇರುವುದಕ್ಕೆ ಶೇ 26ರಷ್ಟು ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ 931 ಜನರು ಭಾಗವಹಿಸಿದ್ದರು. ಲಾಕ್‌ಡೌನ್‌ 1.0 ಮತ್ತು 2.0 ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

ಶೇ 79ರಷ್ಟು ಜನರಲ್ಲಿ ಭಯ, ಆತಂಕ ಮನೆ ಮಾಡಿದೆ. ಶೇ 32ರಷ್ಟು ಜನರಲ್ಲಿ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಚಿಂತೆ. ಶೇ 16ರಷ್ಟು ಜನರಲ್ಲಿ ಭವಿಷ್ಯದ ಅನಿಶ್ಚಿತತೆ ಬಗ್ಗೆ ಕಳವಳ. ಶೇ 19ರಷ್ಟು ಜನರು ಸರ್ಕಾರದ ಕಾರ್ಯದಕ್ಷತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಸಂಖ್ಯೆ 931, ಒಟ್ಟು 23 ರಾಜ್ಯಗಳಲ್ಲಿ ಸಮೀಕ್ಷೆ ನಡೆಯಿತು. 104 ನಗರಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

(ಇದು ಲಾಕ್‌ಡೌನ್‌ 1.0 ಮತ್ತು 2.0 ಸಂದರ್ಭದಲ್ಲಿ ನಡೆದ ಸಮೀಕ್ಷೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು