ನವದೆಹಲಿ: ‘ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತಗೊಳಿಸುವ ನಿರೀಕ್ಷೆಯಿದೆ’ ಎಂದು ಕೇಂದ್ರ ತೈಲ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಏರಿಳಿತ ಕಾಣುತ್ತಿದೆ. ಕಳೆದ ವಾರ ಬ್ರೆಂಟ್ ಕಚ್ಚಾ ತೈಲವು ಕಳೆದ ಮೂರು ವರ್ಷದಲ್ಲಿ ಮೊದಲ ಬಾರಿಗೆ ಕನಿಷ್ಠ ಬೆಲೆಯಾದ 70 ಡಾಲರ್‌ಗೆ (ಪ್ರತಿ ಬ್ಯಾರೆಲ್‌ಗೆ) ಇಳಿಕೆ ಕಂಡಿತ್ತು. ಗುರುವಾರ ಪ್ರತಿ ಬ್ಯಾರೆಲ್‌ಗೆ 74.58 ಡಾಲರ್ ಆಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 71.71 ಡಾಲರ್‌ಗೆ ತಲುಪಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗೆ ಇಳಿದಿದ್ದ ಕಚ್ಚಾ ತೈಲದ ಬೆಲೆಯು ನಂತರ ಏರಿಕೆಯಾಗಿದೆ’ ಎಂದರು.
‘ತೈಲ ಬೆಲೆಯಲ್ಲಿ ಸ್ಥಿರತೆ ಕಾಣದ ಹೊರತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಉತ್ಪಾದನಾ ವೆಚ್ಚ ಆಧರಿಸಿ ಪ್ರತಿದಿನ ಇಂಧನ ಬೆಲೆಯನ್ನು ಪರಿಷ್ಕರಿಸುವ ಹಳೆಯ ಪದ್ಧತಿಗೆ ಮರಳುವ ಸಾಧ್ಯತೆ ತೀರಾ ಕಡಿಮೆ’ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ವರ್ಷದಿಂದಲೂ ಭಾರತೀಯ ತೈಲ ನಿಗಮ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಉತ್ಪಾದನಾ ವೆಚ್ಚದ ಆಧಾರದ ಮೇಲೆ ದೈನಂದಿನ ಬೆಲೆ ಪರಿಷ್ಕರಣೆಯನ್ನು ಕೈಬಿಟ್ಟಿವೆ.
ತೈಲ ಕಂಪನಿಗಳು 2022ರ ಏಪ್ರಿಲ್‌ನಿಂದಲೂ ಇಂಧನ ಬೆಲೆಯಲ್ಲಿ ಕಡಿತ ಮಾಡಿರಲಿಲ್ಲ. ಆದರೆ, ಲೋಕಸಭಾ ಚುನಾವಣೆ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ ₹2 ಕಡಿತಗೊಳಿಸಿದ್ದವು.