ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈನ್‌ ಪಾರ್ಕ್‌ಗೆ ಪಿಪಿಪಿ ಮೊರೆ

10 ಸಾವಿರ ಟನ್ ಸಾಮರ್ಥ್ಯದ ಶೀತಲಗೃಹ ನಿರ್ಮಾಣ
Published : 1 ಸೆಪ್ಟೆಂಬರ್ 2024, 1:02 IST
Last Updated : 1 ಸೆಪ್ಟೆಂಬರ್ 2024, 1:02 IST
ಫಾಲೋ ಮಾಡಿ
Comments

ಬೆಂಗಳೂರು: ಅನುದಾನದ ಕೊರತೆಯಿಂದ ದಶಕದಿಂದ ನನೆಗುದಿಗೆ ಬಿದ್ದಿರುವ ವಿಜಯಪುರ ಜಿಲ್ಲೆಯ ತೊರವಿ ವೈನ್‌ ಪಾರ್ಕ್‌ ಸ್ಥಾಪನೆ ಯೋಜನೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಕ್ಕೆ ತರಲು ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಮಂಡಳಿ ಮುಂದಾಗಿದೆ. ಯೋಜನೆಗೆ ಹೂಡಿಕೆದಾರರಿಗೆ ಆಹ್ವಾನವನ್ನೂ ನೀಡಿದೆ.

ವೈನ್‌ ಪಾರ್ಕ್‌ ಸ್ಥಾಪನೆಗೆ ತೊರವಿಯಲ್ಲಿ 141 ಎಕರೆ ಜಮೀನನ್ನು ದಶಕದ ಹಿಂದೆಯೇ ಕಾಯ್ದಿರಿಸಲಾಗಿತ್ತು. ಆದರೆ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಮೊದಲ ಹಂತದಲ್ಲಿ ಶೀತಲಗೃಹ ನಿರ್ಮಾಣ ಕಾರ್ಯ ಆರಂಭಿಸಿದ್ದು, ಯೋಜನೆ ಅಗತ್ಯವಿರುವ ₹100 ಕೋಟಿಗಿಂತ ಹೆಚ್ಚು ಮೊತ್ತದ ಹೂಡಿಕೆಗೆ ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನ ಆರಂಭವಾಗಿದೆ.

ವಿಜಯಪುರ, ಬೆಳಗಾವಿ, ಬಾಗಲಕೋಟೆ, ಮತ್ತಿತರ ಜಿಲ್ಲೆಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅಂದಾಜು ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿ ಮೌಲ್ಯದ ವಹಿವಾಟು ನಡೆಯುತ್ತದೆ. ಇವೆಲ್ಲವೂ ಮಹಾರಾಷ್ಟ್ರಕ್ಕೆ ಹೋಗುವುದರಿಂದ ಆದಾಯವೂ ಆ ರಾಜ್ಯದ ಪಾಲಾಗುತ್ತಿದೆ. ರಾಜ್ಯಕ್ಕೆ ವರಮಾನ ಹೆಚ್ಚಿಸುವುದು ಹಾಗೂ ಸ್ಥಳೀಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವೈನ್ ಪಾರ್ಕ್ ನಿರ್ಮಿಸುವ ಪ್ರಸ್ತಾವವಿದೆ.

ವೈನ್ ಪಾರ್ಕ್‌ನಲ್ಲಿ ಏನೇನು?:

ವೈನ್ ತಯಾರಿಕಾ ಘಟಕ, ಒಣ ದ್ರಾಕ್ಷಿ ಸಂಸ್ಕರಣಾ ಘಟಕ, ವಿವಿಧ ಮಾದರಿಯ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ, ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ಮಾದರಿಯಲ್ಲಿ ವೈನ್ ತಯಾರಿಸುವುದು, ರೆಸ್ಟೋರೆಂಟ್, ದ್ರಾಕ್ಷಾರಸ ತಯಾರಿಕೆ ಪ್ರಾತ್ಯಕ್ಷಿಕೆ, ಗ್ರಂಥಾಲಯ ಹಾಗೂ ಕ್ರೀಡಾ ಚಟುವಟಿಕೆಗಳು ವೈನ್ ಪಾರ್ಕ್‌ ಯೋಜನೆಯಲ್ಲಿವೆ.

‘ವಿಜಯಪುರದ ಗೋಳಗುಮ್ಮಟ ಹಾಗೂ ನೆರೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟು, ಬದಾಮಿ, ಐಹೊಳೆ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು ಗಮನದಲ್ಲಿಸಿರಿಕೊಂಡು ವಿಜಯಪುರ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ವೈನ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿದೆ’ ಎಂದು ದ್ರಾಕ್ಷಿ ಮತ್ತು ವೈನ್ ಮಂಡಳಿ ಅಧ್ಯಕ್ಷ ಯೋಗೇಶ್ ಬಾಬು ತಿಳಿಸಿದರು.

ರಾಜ್ಯದಲ್ಲಿ 32,473 ಹೆಕ್ಟೇರ್ ಪ್ರದೇಶಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ವಾರ್ಷಿಕ ಉತ್ಪಾದನೆ 8.21 ಲಕ್ಷ ಟನ್ ಇದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ₹39.95 ಕೋಟಿ ವೆಚ್ಚದಲ್ಲಿ 10 ಸಾವಿರ ಟನ್ ಸಾಮರ್ಥ್ಯದ ಶೀತಲಗೃಹ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಒಣ ದ್ರಾಕ್ಷಿ ಸಂಸ್ಕರಣ ಘಟಕವನ್ನು ತೊರವಿಯಲ್ಲಿ ನಿರ್ಮಿಸಲಾಗುತ್ತಿದೆ.

‘ರಾಜ್ಯದಲ್ಲಿ 1.25 ಲಕ್ಷ ಟನ್ ಒಣದ್ರಾಕ್ಷಿ ಉತ್ಪಾದನೆ ಆಗುತ್ತಿದೆ. ವಿಜಯಪುರ, ಬೆಳಗಾವಿ, ಬೆಳಗಾವಿ ಜಿಲ್ಲೆಯಲ್ಲಿ ಒಣದ್ರಾಕ್ಷಿ ಸಂಗ್ರಹಣೆಗೆ 50 ಸಾವಿರ್ ಟನ್ ಶೇಖರಣಾ ಸಾಮರ್ಥ್ಯ ಹೊಂದಿರುವ ಒಟ್ಟು 38 ಶೀತಲಗೃಹಗಳಿವೆ. ಮಹಾರಾಷ್ಟ್ರದ ಸಾಂಗ್ಲಿ– ತಾಸ್‌ಗಾವ್‌ನಲ್ಲಿರುವ ಶೀತಲಗೃಹಗಳಲ್ಲಿ ಸುಮಾರು 70 ಸಾವಿರ ಟನ್‌ ದ್ರಾಕ್ಷಿ ರಕ್ಷಿಸಿಟ್ಟು ಯೋಗ್ಯ ಬೆಲೆ ಸಿಕ್ಕಾಗ ಮಾರಾಟ ಮಾಡುತ್ತಿದ್ದಾರೆ’ ಎಂದು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ತಿಳಿಸಿದರು.

ವೈನ್‌ ಮೇಳಕ್ಕೆ ಅನುದಾನದ ಕೊರತೆ

ಅನುದಾನದ ಕೊರತೆಯಿಂದಾಗಿ ವೈನ್ ಮೇಳ ಆಯೋಜನೆ ಮಾಡಲಾಗುತ್ತಿಲ್ಲ. ರಾಜ್ಯಮಟ್ಟದ ಮೇಳಕ್ಕೆ ಕನಿಷ್ಠ ₹1 ಕೋಟಿ ಹಾಗೂ ಜಿಲ್ಲಾ ಮಟ್ಟಕ್ಕೆ ₹25 ಲಕ್ಷ ಅನುದಾನ ಅಗತ್ಯವಿದೆ.

‘ವೈನ್ ಮೇಳ ನಡೆಸಲು ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲಭ್ಯವಿರುವ ಅನುದಾನದಲ್ಲಿಯೇ ನಗರದ ಮಾಲ್‌ಗಳ ಸಹಯೋಗದೊಂದಿಗೆ ಮೇಳ ಆಯೋಜಿಸಲಾಗುತ್ತಿದೆ. ದ್ರಾಕ್ಷಾರಸ ಉದ್ಯಮದ ವಹಿವಾಟು ₹200 ಕೋಟಿ ತಲುಪಿದೆ’ ಎಂದು ಯೋಗೇಶ್ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT