ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಟಿವಿ ಪ್ರವರ್ತಕ ಕಂಪನಿಗೆ ಪ್ರಣಯ್, ರಾಧಿಕಾ ರಾಜೀನಾಮೆ

Last Updated 30 ನವೆಂಬರ್ 2022, 10:56 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎನ್‌ಡಿಟಿವಿ ಸುದ್ದಿವಾಹಿನಿಯ ಪ್ರವರ್ತಕ ಕಂಪನಿಯಾಗಿರುವ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್‌ ಪ್ರೈ.ಲಿ. ನಿರ್ದೇಶಕ ಸ್ಥಾನಕ್ಕೆ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ಸಲ್ಲಿಸಿದ್ದಾರೆ.

ಎನ್‌ಡಿಟಿವಿ ವಾಹಿನಿಯಲ್ಲಿ ಶೇಕಡ 29.18ರಷ್ಟು ಷೇರು ಹೊಂದಿರುವ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್‌ ಕಂಪನಿಯನ್ನು ಅದಾನಿ ಸಮೂಹ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಪ್ರಣಯ್ ಮತ್ತು ರಾಧಿಕಾ ಅವರು ಎನ್‌ಡಿಟಿವಿ ವಾಹಿನಿಯಲ್ಲಿ ಪ್ರವರ್ತಕರಾಗಿ ಈಗ ಶೇ 32.26ರಷ್ಟು ಪಾಲು ಹೊಂದಿದ್ದಾರೆ. ಅವರು ಎನ್‌ಡಿಟಿವಿ ಆಡಳಿತ ಮಂಡಳಿಯ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿಲ್ಲ.

ಪ್ರಣಯ್ ಅವರು ಎನ್‌ಡಿಟಿವಿ ಅಧ್ಯಕ್ಷ, ರಾಧಿಕಾ ಅವರು ಅದರ ಕಾರ್ಯನಿರ್ವಾಹಕ ನಿರ್ದೇಶಕಿ. ಪ್ರಣಯ್ ಮತ್ತು ರಾಧಿಕಾ ಅವರು ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ನ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿರುವ ವಿಚಾರವನ್ನು ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ ಲಿಮಿಟೆಡ್) ಷೇರುಪೇಟೆಗೆ ಮಂಗಳವಾರ ತಿಳಿಸಿದೆ.

ಆರ್‌ಆರ್‌ಪಿಆರ್‌ ಆಡಳಿತ ಮಂಡಳಿಯು ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಸಿನ್ನಿಯ ಚೆಂಗಲ್ವರಾಯನ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ. ಈ ಮೂವರನ್ನು ಅದಾನಿ ಸಮೂಹ ನೇಮಕ ಮಾಡಿದೆ.

ಪ್ರಣಯ್ ಮತ್ತು ರಾಧಿಕಾ ಅವರು 2009ರಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್‌ ಪ್ರೈ.ಲಿ. (ವಿಸಿಪಿಎಲ್‌) ಕಂ‍ಪನಿಯಿಂದ ₹ 400 ಕೋಟಿಗೂ ಹೆಚ್ಚಿನ ಮೊತ್ತವನ್ನು ಬಡ್ಡಿರಹಿತ ಸಾಲವಾಗಿ ಪಡೆದಿದ್ದರು. ಸಾಲವನ್ನು ಆರ್‌ಆರ್‌‍ಪಿಆರ್ ಹೋಲ್ಡಿಂಗ್ಸ್ ಕಂಪನಿಯ ಷೇರುಗಳನ್ನಾಗಿ ಪರಿವರ್ತಿಸಿಕೊಳ್ಳುವ ಆಯ್ಕೆಯನ್ನು ವಿಸಿಪಿಎಲ್‌ಗೆ ನೀಡಲಾಗಿತ್ತು.

ಅದಾನಿ ಸಮೂಹವು ಆಗಸ್ಟ್‌ನಲ್ಲಿ ವಿಸಿಪಿಎಲ್ ಕಂಪನಿಯನ್ನು ಖರೀದಿಸಿತು. ಅದು ಹಿಂದೆ ನೀಡಿದ್ದ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಬಳಸಿಕೊಂಡಿತು. ಆರಂಭದಲ್ಲಿ ಇದನ್ನು ವಿರೋಧಿಸಿದ್ದ ಪ್ರಣಯ್ ಮತ್ತು ರಾಧಿಕಾ, ನಂತರದಲ್ಲಿ ಷೇರುಗಳನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಒಪ್ಪಿದರು. ಆಗ ವಿಸಿಪಿಎಲ್‌ಗೆ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್‌ನ ಶೇ 99.5ರಷ್ಟು ಷೇರುಗಳು ಸಿಕ್ಕವು.

ಅದಾನಿ ಸಮೂಹವು ಎನ್‌ಡಿಟಿವಿ ಲಿಮಿಟೆಡ್‌ನ ಶೇ 26ರಷ್ಟು ಷೇರುಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಗೆ ಮುಂದಾಗಿದೆ. ಷೇರುದಾರರು ತಮ್ಮ ಷೇರುಗಳನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡಲು ಡಿಸೆಂಬರ್ 5ರವರೆಗೆ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT