ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತು ಬೆಲೆ ಶೇ 75 ಏರಿಕೆ

ಎನ್‌ಡಿಎ ಅವಧಿಯಲ್ಲಿ ಹಣದುಬ್ಬರ ಇಳಿದರೂ ದರ ಇಳಿಯಲಿಲ್ಲ
Last Updated 14 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶದ ಹಣದುಬ್ಬರ ಪ್ರಮಾಣವು ಶೇ 50ರಷ್ಟು ಇಳಿದಿದ್ದರೂ ದಿನಬಳಕೆಯ ಕನಿಷ್ಠ ಹತ್ತು ವಸ್ತುಗಳ ಬೆಲೆ ಗರಿಷ್ಠ ಶೇ 75ರವರೆಗೆ ಏರಿಕೆಯಾಗಿದೆ.

2014ರಿಂದ 2018ರವರೆಗಿನ ನಾಲ್ಕು ವರ್ಷಗಳಲ್ಲಿ ಅಕ್ಕಿ, ಗೋಧಿ, ಧಾನ್ಯಗಳು, ಸಕ್ಕರೆ, ಖಾದ್ಯ ತೈಲ, ಹಾಲು ಹಾಗೂ ಅಡುಗೆ ಅನಿಲದ ಬೆಲೆಯು ಕನಿಷ್ಠ ಶೇ 7ರಿಂದ ಗರಿಷ್ಠ ಶೇ 75ರಷ್ಟು ಏರಿಕೆಯಾಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಹಾಗೂ ಕೃಷಿ ಸಚಿವಾಲಯಗಳು ಮಂಡಿಸಿರುವ ಅಂಕಿಅಂಶಗಳು ಹೇಳಿವೆ.

2014ರ ಮೇ ತಿಂಗಳಲ್ಲಿ ₹ 24 ಇದ್ದ ಸಕ್ಕರೆಯ ಬೆಲೆ 2018ರ ಜೂನ್‌ ವೇಳೆಗೆ ಶೇ 75ರಷ್ಟು ಏರಿಕೆಯಾಗಿ ₹ 42ಕ್ಕೆ ತಲುಪಿದೆ. ಉತ್ತರ ಭಾರತದಲ್ಲಿ ದಿನಬಳಕೆ ವಸ್ತುವಾಗಿರುವ ಕಡಲೆ ಬೇಳೆಯ ಬೆಲೆ ಶೇ 50ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಹಾಲು ಶೇ 17, ಅಡುಗೆ ಅನಿಲ ಶೇ 23, ಗೋಧಿ ಶೇ 8.50 ಹಾಗೂ ಅಕ್ಕಿ ಶೇ 19ರಷ್ಟು ತುಟ್ಟಿಯಾಗಿದೆ.

2014ರ ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಅವರು, ‘ನಾವು ಅಧಿಕಾರಕ್ಕೆ ಬಂದರೆ ದಿನಬಳಕೆ ವಸ್ತುಗಳ ಬೆಲೆ ಇಳಿಸುತ್ತೇವೆ’ ಎಂಬ ಭರವಸೆ ನೀಡಿದ್ದರು. ಅಷ್ಟೇ ಅಲ್ಲ, ಕಳೆದ ವಾರ ಬಿಜೆಪಿ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಯಲ್ಲಿ ‘ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ’ ಎಂದೂ ಪಕ್ಷ ಹೇಳಿಕೊಂಡಿದೆ. ಆದರೆ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಆಹಾರ ಮತ್ತು ಪಡಿತರ ವಿತರಣಾ ಸಚಿವರು 2014 ರಿಂದ 2018ರ ಅವಧಿಯಲ್ಲಿ ನೀಡಿದ್ದ ಹಲವು ಅಂಕಿ ಅಂಶಗಳು, ‘ಬೆಲೆಗಳ ನಿಯಂತ್ರಣಕ್ಕೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಅವು ಫಲ ನೀಡಲಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿವೆ. ಇದರಿಂದ ಜನರ ತಲಾ ಆದಾಯ ಮತ್ತು ಅಗತ್ಯ ವಸ್ತುಗಳ ಬೆಲೆಯ ನಡುವಿನ ಅಂತರ ಹೆಚ್ಚಾಗಿದೆ.

ಎನ್‌ಡಿಎ ಆಡಳಿತದ ಮೊದಲ ಮೂರು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದ್ದರೂ ದಿನಬಳಕೆ ವಸ್ತುಗಳ ಬೆಲೆ ಹೆಚ್ಚುತ್ತಲೇ ಇತ್ತು. 2011ರಲ್ಲಿ ಬ್ಯಾರಲ್‌ಗೆ 120 ಡಾಲರ್‌ ಇದ್ದ ಕಚ್ಚಾ ತೈಲ ಬೆಲೆಯು 2016ರಲ್ಲಿ ಬ್ಯಾರಲ್‌ಗೆ 40 ಡಾಲರ್‌ಗೆ ಇಳಿದಿತ್ತು. ಆದರೂ ಇಲ್ಲಿ ತೈಲ ಬೆಲೆಯನ್ನು ಕಡಿಮೆ ಮಾಡಿರಲಿಲ್ಲ. ಡೀಸೆಲ್‌ ಹಾಗೂ ಪೆಟ್ರೋಲ್‌ ಮೇಲಿನ ಸುಂಕ ಹಾಗೂ ವ್ಯಾಟ್‌ ಏರಿಸುವ ಮೂಲಕ ಸರ್ಕಾರವು ತೈಲ ಬೆಲೆಯನ್ನು ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಮಟ್ಟದಲ್ಲೇ ಉಳಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT