ಬುಧವಾರ, ಮೇ 18, 2022
28 °C

ವಾಣಿಜ್ಯ: ಪ್ರಶ್ನೋತ್ತರ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ಚಂದ್ರಕಲಾ, ರಾಮನಗರ

l ಪ್ರಶ್ನೆ: ನಾನು ಮತ್ತು ನನ್ನ ಪತಿ ಶಾಲಾ ಶಿಕ್ಷಕರು. ನನ್ನ ಸಂಬಳ ₹ 35,000. ನನ್ನ ಗಂಡನ ಸಂಬಳ ₹ 60 ಸಾವಿರ. ನಮಗೆ ಇಬ್ಬರು ಮಕ್ಕಳು. ಮಗಳಿಗೆ 8 ವರ್ಷ, ಮಗನಿಗೆ 6 ವರ್ಷ ವಯಸ್ಸು. ನಮಗೆ ಸರಿಯಾದ ಆರ್ಥಿಕ ಯೋಜನೆ ತಿಳಿಸಿ.

ಉತ್ತರ: ನಿಮ್ಮ ಸಂಬಳದಲ್ಲಿ ಕಡಿತದ ವಿಚಾರ ತಿಳಿಸಿಲ್ಲ. ಸಂಬಳದ ಶೇ 10ರಷ್ಟು ಕೆಜಿಐಡಿ ವಿಮೆಗೆ ಇಬ್ಬರೂ ಮುಡಿಪಾಗಿಡಿ. ಇಬ್ಬರೂ ಪಿಪಿಎಫ್ ಖಾತೆ ತೆರೆದು ಕನಿಷ್ಠ ತಲಾ ₹ 5,000 ತಿಂಗಳಿಗೆ ಜಮಾ ಮಾಡಿ. ಹೆಣ್ಣು ಮಗುವಿನ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಪ್ರಾರಂಭಿಸಿ, ಇಬ್ಬರಿಗೂ ಕನಿಷ್ಠ ₹ 10 ಸಾವಿರ ಜಮಾ ಮಾಡಿ. ಗಂಡು ಮಗುವಿನ ಸಲುವಾಗಿ ಇಬ್ಬರಿಂದ ತಿಂಗಳಿಗೆ ಕನಿಷ್ಠ ₹ 10 ಸಾವಿರ ಆರ್.ಡಿ. 10 ವರ್ಷಗಳ ಅವಧಿಗೆ ಮಾಡಿರಿ. ಎರಡೂ ಮಕ್ಕಳ ಸಲುವಾಗಿ ವಾರ್ಷಿಕ 10+10=20 ಗ್ರಾಂ ಬಂಗಾರದ ನಾಣ್ಯ ಕೊಳ್ಳಿರಿ. ಇದಕ್ಕೋಸ್ಕರ ಇಬ್ಬರಿಂದ ₹ 10 ಸಾವಿರ ಆರ್‌.ಡಿ., ಒಂದು ವರ್ಷಕ್ಕೆ ಮಾಡಿ. ವರ್ಷಾಂತ್ಯದಲ್ಲಿ ಬಂಗಾರ ಕೊಳ್ಳಿರಿ. ಇದರಿಂದ ನಿಮ್ಮ ಮಕ್ಕಳ ಬಾಳು ಬಂಗಾರವಾಗುತ್ತದೆ. ಈ ಪ್ರಕ್ರಿಯೆ ಮಕ್ಕಳ ಮದುವೆ ತನಕ ಮುಂದುವರೆಸಿರಿ. ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಸೇರಿಸಿ ₹ 5 ಲಕ್ಷದ ಆರೋಗ್ಯ ವಿಮೆ ಕೆನರಾ ಬ್ಯಾಂಕ್‌ನಲ್ಲಿ ಮಾಡಿ. ನಿಮ್ಮ ಮುಂದಿನ ಗುರಿ ಒಂದು ನಿವೇಶನ ಕೊಳ್ಳುವುದಾಗಿರಲಿ. ಹೀಗೆ ನಿವೇಶನ ಕೊಳ್ಳುವಾಗ ಸ್ವಲ್ಪ ಸಾಲ ಮಾಡಿದರೂ ಚಿಂತಿಸುವುದು ಬೇಡ. ಸ್ಥಿರ ಆಸ್ತಿ ಯಾವಾಗಲೂ ಸ್ಥಿರವಾಗಿರುತ್ತದೆ.

***

ಬಸವರಾಜು, ತುಮಕೂರು

l ಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 67 ವರ್ಷ. ತಿಂಗಳ ಪಿಂಚಣಿ ₹ 30 ಸಾವಿರ. ನನಗೆ ಒಬ್ಬಳೇ ಮಗಳು. 6 ಹಾಗೂ 8 ವರ್ಷ ವಯಸ್ಸಿನ ಇಬ್ಬರು ಮೊಮ್ಮಕ್ಕಳಿದ್ದಾರೆ. ಮೊಮ್ಮಕ್ಕಳ ಸಲುವಾಗಿ ಒಟ್ಟಿನಲ್ಲಿ ತಿಂಗಳಿಗೆ ₹ 6 ಸಾವಿರ ಕೊಡಬೇಕೆಂದಿದ್ದೇನೆ. ಯಾವ ರೀತಿಯಲ್ಲಿ ಈ ಹಣ ಕೊಟ್ಟರೆ ಅವರ ಭವಿಷ್ಯಕ್ಕೆ ಅನುಕೂಲ? ನನ್ನ ಮಗಳು ಬೆಂಗಳೂರಿನಲ್ಲಿದ್ದಾಳೆ.

ಉತ್ತರ: ನಿಮ್ಮ ಉದ್ದೇಶ ಸಫಲವಾಗಲು ತಲಾ ₹ 3 ಸಾವಿರದಂತೆ ನಿಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ಪ್ರತ್ಯೇಕವಾಗಿ ಆರ್‌.ಡಿ. ಮಾಡಿ, ಅವಧಿಯು 10 ವರ್ಷಗಳಾಗಿರಲಿ. ನಿಮ್ಮ ಮಗಳು Minor by guardian ಆಗಿ ಈ ಖಾತೆ ತೆರೆಯಬೇಕಾಗುತ್ತದೆ. ನೀವು ಯಾವ ಬ್ಯಾಂಕ್‌ನಲ್ಲಿ ಪಿಂಚಣಿ ಪಡೆಯುತ್ತೀರೋ ಅದೇ ಬ್ಯಾಂಕಿನ ಬೆಂಗಳೂರು ಶಾಖೆಯಲ್ಲಿ ಮೊಮ್ಮಕ್ಕಳ ಆರ್‌.ಡಿ. ಪ್ರಾರಂಭಿಸಲು ತಿಳಿಸಿ. ಆರ್‌.ಡಿ. ಖಾತೆ ತೆರೆದ ನಂತರ ನೀವು ತುಮಕೂರಿನಲ್ಲಿ ಪಿಂಚಣಿ ಪಡೆಯುವ ಬ್ಯಾಂಕ್‌ ಖಾತೆಗೆ ಸೂಚನೆ ಕೊಟ್ಟಲ್ಲಿ, ಬ್ಯಾಂಕ್‌ನವರು ಪ್ರತಿ ತಿಂಗಳು ನಿಮ್ಮ ಮೊಮ್ಮಕ್ಕಳ ಆರ್‌.ಡಿ. ಖಾತೆಗೆ ಖರ್ಚು ಹಾಕಿ ಹಣಕಳುಹಿಸುತ್ತಾರೆ. ಶೇ 6ರ ಬಡ್ಡಿ ದರದಲ್ಲಿ ಈ ಆರ್‌.ಡಿ. ಖಾತೆ 10 ವರ್ಷ ಕಳೆಯುತ್ತಲೇ ಪ್ರತಿ ಮಗುವಿಗೆ ₹ 4,63,254 ಮೊತ್ತವನ್ನು ಬ್ಯಾಂಕ್‌ನವರು ವಿತರಿಸುತ್ತಾರೆ. ನಿಮ್ಮ ಒಳ್ಳೆಯ ಉದ್ದೇಶದ ಫಲ ಮಕ್ಕಳ ವಿಧ್ಯಾಭ್ಯಾಸ ಹಾಗೂ ಭವಿಷ್ಯಕ್ಕೆ ತುಂಬಾ ಸಹಾಯವಾಗಲಿದೆ. ಹನಿಗೂಡಿ ಹಳ್ಳ, ತೆನೆಗೂಡಿ ಬಳ್ಳ ಎನ್ನುವ ಗಾದೆ ಮಾತು ಇಲ್ಲಿ ಸ್ಮರಿಸಬಹುದು.

***

ಶ್ರೀನಿವಾಸಮೂರ್ತಿ, ಬೆಳಗಾವಿ

l ಪ್ರಶ್ನೆ: ಠೇವಣಿಗಳಿಗೆ ನಾಮ ನಿರ್ದೇಶನ ಮಾಡಿದ ನಂತರ ಉಯಿಲು ಬರೆಯುವ ಅವಶ್ಯವಿದೆಯೇ ಹಾಗೂ ಸ್ಥಿರ ಆಸ್ತಿ ವಿಚಾರದಲ್ಲಿ ನಾಮನಿರ್ದೇಶನ ಮಾಡಬಹುದೇ ತಿಳಿಸಿ.

ಉತ್ತರ: ಚರ ಆಸ್ತಿಗಳಾದ ಠೇವಣಿ, ವಿಮಾ ಪಾಲಿಸಿ, ಷೇರು ಬಾಂಡ್‌ಗಳು, ಲಾಕರು... ಇವುಗಳಿಗೆ ನಾಮನಿರ್ದೇಶನ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಠೇವಣಿಯ ಮೇಲೆ ನಾಮ ನಿರ್ದೇಶನ ಮಾಡಿದ ನಂತರ ಉಯಿಲು ಬರೆಯುವ ಅವಶ್ಯವಿಲ್ಲವಾದರೂ ಠೇವಣಿಗೆ ಓರ್ವ ವ್ಯಕ್ತಿಯ ಹೆಸರು ಮಾತ್ರ ನಾಮನಿರ್ದೇಶನ ಮಾಡುವ ಸವಲತ್ತು ಬ್ಯಾಂಕಿಂಗ್‌ ಆ್ಯಕ್ಟ್‌ನಲ್ಲಿ ಇರುವುದರಿಂದ ಠೇವಣಿದಾರ ಮರಣ ಹೊಂದಿದಾಗ ಉಳಿದ ಮಕ್ಕಳು ಬ್ಯಾಂಕ್‌ಗೆ ತಕರಾರು ಅರ್ಜಿ ಸಲ್ಲಿಸಿದಲ್ಲಿ, ನಾಮ ನಿರ್ದೇಶನ ಹೊಂದಿದ ವ್ಯಕ್ತಿ ಹಣ ಪಡೆಯಲು ಪರದಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಾಮನಿರ್ದೇಶನದ ಜೊತೆಗೆ ಉಯಿಲು ಕೂಡಾ ಇದ್ದಲ್ಲಿ, ಬ್ಯಾಂಕ್‌ನಲ್ಲಿ ಹಣ ಪಡೆಯಲು ಅನುಕೂಲ ಆಗುತ್ತದೆ. ನಾಮ ನಿರ್ದೇಶನ ಇದ್ದು, ಠೇವಣಿದಾರನ ಮರಣಾನಂತರ ಹಣ ಪಡೆಯಲಾಗದ ಬಹಳಷ್ಟು ಸಂದರ್ಭಗಳಿವೆ. ಸ್ಥಿರ ಆಸ್ತಿ ವಿಚಾರದಲ್ಲಿ ನಾಮ ನಿರ್ದೇಶನದ ಸವಲತ್ತು ಇರುವುದಿಲ್ಲ. ಉಯಿಲನ್ನೇ ಬರೆಯಬೇಕಾಗುತ್ತದೆ. ಸಾಮಾನ್ಯವಾಗಿ ಠೇವಣಿ ಇರಿಸಿದವರೆಲ್ಲಾ ಉಯಿಲು ಬರೆಯುವುದಿಲ್ಲ. ತಕರಾರು ಇರುವ ಅಥವಾ ಬರುವ ಸಂದರ್ಭಗಳಿದ್ದರೆ ಮಾತ್ರ ಉಯಿಲು ಬರೆಯುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು