ಗುರುವಾರ , ಜೂನ್ 4, 2020
27 °C

ಆರ್ಥಿಕತೆ ಕುಸಿಯದಂತೆ ತಡೆಯಲು ಇನ್ನಷ್ಟು ಕ್ರಮಗಳನ್ನು ಘೋಷಿಸಿದ ರಿಸರ್ವ್ ಬ್ಯಾಂಕ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್-19 ಭೀತಿಯಿಂದ ಕುಸಿಯುತ್ತಿರುವ ಆರ್ಥಿಕತೆಗೆ ಆಸರೆ ಒದಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ಬುಧವಾರ ಹಲವು ಕ್ರಮಗಳನ್ನು ಪ್ರಕಟಿಸಿದೆ.

ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ವಿದೇಶಿ ಗ್ರಾಹಕರಿಗೆ ಸರಬರಾಜು ಮಾಡಿದ ಉತ್ಪನ್ನಗಳಿಗೆ ಹಣ ಪಡೆದುಕೊಳ್ಳಲು ಇದ್ದ ಸಮಯದ ಮಿತಿಯನ್ನು 9 ತಿಂಗಳಿನಿಂದ 15 ತಿಂಗಳಿಗೆ ವಿಸ್ತರಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಂಗಡ ಸ್ವೀಕಾರ ಮಿತಿಯನ್ನೂ (ವೇಸ್ ಅಂಡ್ ಮೀನ್ಸ್‌ ಅಡ್ವಾನ್ಸ್) ಆರ್‌ಬಿಐ ಶೇ 30ರಷ್ಟು ಹೆಚ್ಚಿಸಿದೆ. ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಸೆಪ್ಟೆಂಬರ್ 30ರವರೆಗೂ ಜಾರಿಯಲ್ಲಿರುತ್ತದೆ.

ಅನೂಹ್ಯ ಸಂದರ್ಭಗಳಲ್ಲಿ ಉಂಟಾಗಬಹುದಾದ ನಷ್ಟಗಳನ್ನು ತುಂಬಿಕೊಳ್ಳಲು ಬ್ಯಾಂಕ್‌ಗಳು ಮೀಸಲಿಡುವ ಬಂಡವಾಳ ನಿಧಿ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಕೋವಿಡ್-19 ಪಿಡುಗಿನಿನಿಂದ ವಿಶ್ವದ ಹಲವು ದೇಶಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜುಲೈ 31ರವರೆಗೆ ರಫ್ತು ಮಾಡಿದ ಉತ್ಪನ್ನಗಳ ಹಣ ಸ್ವೀಕಾರಕ್ಕೆ ಸಮಯದ ಮಿತಿಯನ್ನು 15 ತಿಂಗಳಿಗೆ ವಿಸ್ತರಿಸಲಾಗಿದೆ. ಇದರಿಂದ ರಫ್ತುದಾರರು ಪಾವತಿ ಒಪ್ಪಂದಗಳನ್ನು ಹೊಸ ರೀತಿಯಲ್ಲಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಆಗಿದೆ ಎಂದು ಆರ್‌ಬಿಐ ಹೇಳಿದೆ.

ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯಲು ನಿರ್ಬಂಧ ವಿಧಿಸಿರುವ ಕಾರಣ, ರಾಜ್ಯ ಸರ್ಕಾರಗಳ ಆದಾಯದಲ್ಲಿ ಕೊರತೆಯಾಗಬಹುದು. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ನೀಡುವ ಮುಂಗಡಗಳ ಪ್ರಮಾಣವನ್ನು ಶೇ 30ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದೂ ಸಹ ಆರ್ಥಿಕತೆಯ ಚೇತರಿಕೆಗೆ ಪೂರಕ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು