ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಬಿಕ್ಕಟ್ಟಿಗೆ ಭಿನ್ನಮತ ಪರಿಹಾರವಲ್ಲ

Last Updated 31 ಅಕ್ಟೋಬರ್ 2018, 19:42 IST
ಅಕ್ಷರ ಗಾತ್ರ

ಜಗತ್ತಿನೆಲ್ಲೆಡೆ ಚುನಾಯಿತ ಸರ್ಕಾರಗಳು ಮತ್ತು ಆಯಾ ದೇಶದ ಸರ್ವೋಚ್ಚ ಬ್ಯಾಂಕ್ ನಡುವೆ ಘರ್ಷಣೆ ಉಂಟಾಗುವುದು ಸರ್ವೇ ಸಾಮಾನ್ಯ. ಭಾರತದ ವಿಚಾರಕ್ಕೆ ಬರುವುದಾದರೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡುವೆ ಭಿನ್ನಾಭಿಪ್ರಾಯ ಉಲ್ಬಣಿಸಿರುವುದು ಇದೇ ಮೊದಲೇನಲ್ಲ. ಬಡ್ಡಿ ದರಗಳನ್ನು ಪರಿಷ್ಕರಿಸುವಾಗ, ಹೊಸ ನಿಯಮ ಜಾರಿಗೊಳಿಸುವಾಗ, ಸರ್ಕಾರ ಮತ್ತು ಸ್ವಾಯತ್ತ ಸಂಸ್ಥೆಗಳ ನಡುವೆ ಶೀತಲ ಸಮರ ಇದ್ದೇ ಇರುತ್ತದೆ. ರಘುರಾಮ್ ರಾಜನ್ ಗವರ್ನರ್ ಆಗಿದ್ದ ಅವಧಿಯಲ್ಲೂ ಸರ್ಕಾರ ಮತ್ತು ಆರ್‌ಬಿಐ ನಡುವೆ ಇರುಸುಮುರುಸು ಇದ್ದದ್ದು ಎಲ್ಲರಿಗೂ ತಿಳಿದೇ ಇದೆ.

‘ಕೇಂದ್ರ ಸರ್ಕಾರ ಆರ್‌ಬಿಐ ನ ಸ್ವಾಯತ್ತತೆ ಗೌರವಿಸದಿದ್ದರೆ ಹಣಕಾಸು ಮಾರುಕಟ್ಟೆ ಕುಸಿತ ಕಾಣಲಿದೆ’ ಎಂದು ಆರ್‌ಬಿಐನ ಡೆಪ್ಯೂಟಿ ಗವರ್ನರ್ ವಿರಳ್. ವಿ. ಆಚಾರ್ಯಅವರು ಈ ತಿಂಗಳ 26 ರಂದು ಬಹಿರಂಗ ಹೇಳಿಕೆ ಕೊಟ್ಟಿದ್ದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವೆ ಮುಸುಕಿನ ಗುದ್ದಾಟಕ್ಕೆ ಎಡೆಮಾಡಿಕೊಟ್ಟಿತು. ಈ ಹೇಳಿಕೆ ಬೆನ್ನಲ್ಲೇ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿ, ‘2008 ರಿಂದ 2014 ರ ಅವಧಿಯಲ್ಲಿ ವಸೂಲಾಗದ ಸಾಲ ಹೆಚ್ಚಿದೆ. ಆರ್‌ಬಿಐ ಇದರ ನಿಯಂತ್ರಣಕ್ಕೆ ಮುಂದಾಗದಿರಲು ಕಾರಣವೇನು’ ಎಂದು ಬಹಿರಂಗವಾಗಿ ಹರಿಹಾಯ್ದರು.

ಈ ಎರಡೂ ಹೇಳಿಕೆಗಳು ಸರ್ಕಾರ ಮತ್ತು ಆರ್‌ಬಿಐ ನಡುವಣ ಕಾದಾಟಕ್ಕೆ ಕಾರಣವಾದವು. ಮೇಲ್ನೋಟಕ್ಕೆ ಇವೆರೆಡೇ ಕಾರಣ ಎನಿಸಿದರೂ ಫೆಬ್ರುವರಿ 2018 ರಿಂದಲೇ ಸರ್ಕಾರ ಮತ್ತು ಆರ್‌ಬಿಐನ ಕಾದಾಟ ಶುರುವಾಗಿದೆ. ಫೆಬ್ರುವರಿ ತಿಂಗಳಲ್ಲಿ ವಸೂಲಾಗದ ಸಾಲಗಳ (ಎನ್‌ಪಿಎ) ನಿರ್ವಹಣೆಗಾಗಿ ಆರ್‌ಬಿಐ ಹೊಸ ನಿಯಮ ತಂದಿತು. ಸಾಲ ನೀಡಿದ 180 ದಿನಗಳ ಬಳಿಕವೂ ಸಾಲ ಮರುಪಾವತಿ ಪ್ರಾರಂಭವಾಗದಿದ್ದಲ್ಲಿ, ಅದನ್ನು ‘ಎನ್‌ಪಿಎ’ ಎಂದು ಪರಿಗಣಿಸುವಂತೆ ಆರ್‌ಬಿಐ ಸೂಚಿಸಿತು. ಇದರ ನಡುವೆ ಬಡ್ಡಿದರವನ್ನು ಸರ್ಕಾರ ಇಳಿಸುವಂತೆ ಕೋರಿದರೂ ಏರಿಕೆ ಅನಿವಾರ್ಯ ಎಂದು ಬಡ್ಡಿದರ ಪರಿಷ್ಕರಿಸುತ್ತಾ ಸಾಗಿತು. ಈ ಬೆಳವಣಿಗೆಯಿಂದ ಬ್ಯಾಂಕ್‌ಗಳಿಗೆ ಮತ್ತು ಭಾರತದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂಬುದು ಸರ್ಕಾರದ ವಾದವಾಗಿತ್ತು. ಈ ಬೆಳವಣಿಗೆಯೇ ಒಂದು ರೀತಿಯಲ್ಲಿ ಭಿನ್ನಮತಕ್ಕೆ ವೇದಿಕೆ ನಿರ್ಮಿಸಿತು.

ಈ ಎಲ್ಲಾ ವಿದ್ಯಮಾನಗಳ ನಡುವೆ, ‘ಆರ್‌ಬಿಐನ ಸ್ವಾಯತ್ತತೆ ಕಾಪಾಡುವುದು ಅಗತ್ಯ. ಇದು ದೇಶದ ಹಣಕಾಸು ಆಡಳಿತದಲ್ಲಿ ಒಪ್ಪಿಕೊಂಡಿರುವ ಸಂಗತಿಯೇ ಆಗಿದೆ’ ಎಂದು ಕೇಂದ್ರ ಸರ್ಕಾರ ಈಗ ಹೇಳಿಕೆ ನೀಡಿರುವುದು ಹಗ್ಗಜಗ್ಗಾಟವನ್ನು ಶಮನಗೊಳಿಸಲು ಸದ್ಯಕ್ಕೆ ಪೂರಕ ವಾತಾವರಣ ಸೃಷ್ಟಿಸಿದೆ. ಸರ್ಕಾರದ ಹೇಳಿಕೆ ಬೆನ್ನಲ್ಲೇ ಮುಂಬೈ ಷೇರುಪೇಟೆ ಸೂಚ್ಯಂಕ 551 ಅಂಶಗಳ ಏರಿಕೆ ದಾಖಲಿಸಿದೆ.

ರಿಸರ್ವ್ ಬ್ಯಾಂಕ್ ಜೊತೆಗೆ ಕೇಂದ್ರ ಸರ್ಕಾರದ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ಜನರಲ್ಲಿ ಬಲಗೊಂಡು ಅನಗತ್ಯ ಗೊಂದಲ ಸೃಷ್ಟಿಯಾಗುವ ಮೊದಲು ಸರ್ಕಾರ ಮಾತುಕತೆ ಮೂಲಕ ಎಲ್ಲವನ್ನೂ ಪರಿಹರಿಸುವ ಮನಸ್ಸು ಮಾಡಬೇಕಾಗಿದೆ.

ಚರ್ಚೆ, ಟೀಕೆ , ವಾದ-ವಿವಾದ ಇವೆಲ್ಲವೂ ಆಡಳಿತ ವ್ಯವಸ್ಥೆಯ ಭಾಗ ಎನ್ನುವುದನ್ನು ಸರ್ಕಾರ ಮತ್ತು ಆರ್‌ಬಿಐ ಅರ್ಥ ಮಾಡಿಕೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಸಮಸ್ಯೆಯ ಮೂಲ ಹುಡುಕುವ ಪ್ರಯತ್ನ ಮಾಡಬೇಕಾಗಿದೆ.

ಕೇಂದ್ರವೇ ಹೇಳಿರುವ ಹಾಗೆ ಸರ್ಕಾರ ಮತ್ತು ಆರ್‌ಬಿಐ ತಮ್ಮ ಆಡಳಿತದಲ್ಲಿ ಜನರ ಹಿತಾಸಕ್ತಿ ಮತ್ತು ದೇಶದ ಅರ್ಥ ವ್ಯವಸ್ಥೆಗೆ ಪೂರಕವಾದ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಸರ್ಕಾರ ಮತ್ತು ಹಣಕಾಸು ನಿಯಂತ್ರಣ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಪ್ರಗತಿ ಸಾಧ್ಯ ಎನ್ನುವ ದೊಡ್ಡ ಪಾಠವನ್ನು ಜಾಗತಿಕ ಆರ್ಥಿಕ ಬಿಕ್ಕಟ್ಟು ಕಲಿಸಿಕೊಟ್ಟಿರುವುದರಿಂದ ಅದೇ ಹಾದಿಯಲ್ಲಿ ಸಾಗುವುದನ್ನು ರೂಢಿಸಿಕೊಳ್ಳಬೇಕಾಗಿದೆ.

(ಲೇಖಕ, ’ಇಂಡಿಯನ್‌ಮನಿಡಾಟ್‌ಕಾಂ’ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT