ಬುಧವಾರ, ಸೆಪ್ಟೆಂಬರ್ 29, 2021
21 °C

ನ. 19ಕ್ಕೆ ಉರ್ಜಿತ್‌ ಪಟೇಲ್ ರಾಜೀನಾಮೆ?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ನಡೆಯುತ್ತಿರುವ ಸಂಘರ್ಷ ಮುಂದುವರಿದಿದ್ದು, ಇದೇ 19ಕ್ಕೆ ಗವರ್ನರ್ ಉರ್ಜಿತ್ ಪಟೇಲ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ನಗದು ಲಭ್ಯತೆ ನಿಯಮಗಳನ್ನು ಸಡಿಲಿಸಬೇಕು. ಹೆಚ್ಚುವರಿ ನಗದು ಸಂಗ್ರಹವನ್ನು ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಆರ್‌ಬಿಐ ಮೇಲೆ ತೀವ್ರ ಒತ್ತಡ ತರುತ್ತಿದೆ. ಇದರಿಂದಾಗಿ ಪಟೇಲ್‌ ಅವರನ್ನು ರಾಜೀನಾಮೆ ನೀಡುವಂತಹ ಅನಿವಾರ್ಯ ಪರಿಸ್ಥಿತಿಗೆ ದೂಡಿದರೂ ಆಶ್ಚರ್ಯವೇನಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ಆರ್‌ಬಿಐ ಸ್ವಾಯತ್ತೆ ಗೌರವಿಸದೇ ಇದ್ದರೆ ಅಪಾಯ ಕಟ್ಟಿಟ್ಟಬುತ್ತಿ: ರಘುರಾಂ ರಾಜನ್‌

ನ.19ರಂದು ಆರ್‌ಬಿಐ ಆಡಳಿತ ಮಂಡಳಿ ಸಭೆ ನಡೆಯಲಿದೆ. ಅಲ್ಲಿ ಸರ್ಕಾರವನ್ನು ಬೆಂಬಲಿಸುವ ನಿರ್ದೇಶಕರ ಗುಂಪು ಗವರ್ನರ್ ಮೇಲೆ ಒತ್ತಡ ತರಲಿದೆ ಎಂದು ಹೇಳಿವೆ.

ಆರ್‌ಬಿಐ ಗವರ್ನರ್ ಅವರು ಆರ್ಥಿಕತೆಯ ಆದ್ಯತಾ ವಿಷಯಗಳನ್ನು  ಒಪ್ಪಿಕೊಂಡು ಅದನ್ನು ಆಡಳಿತ ಮಂಡಳಿಯೊಂದಿಗೆ ಚರ್ಚಿಸಬೇಕು. ಒಂದೊಮ್ಮೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಬಯಸಿದರೆ ಅವರು ರಾಜೀನಾಮೆ ನೀಡುವುದೇ ಒಳಿತು’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಯಿಟರ್ಸ್‌ ಹೇಳಿದೆ.

ಸರ್ಕಾರದೊಂದಿಗಿನ ಸಂಘರ್ಷದಿಂದ ಉರ್ಜಿತ್‌ ಅವರು ಬಳಲಿದ್ದು, ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆನ್‌ಲೈನ್‌ ಸುದ್ದಿಸಂಸ್ಥೆ ‘ಮನಿಲೈಫ್‌’ ವರದಿಯನ್ನೂ ರಾಯಿಟರ್ಸ್‌ ಉಲ್ಲೇಖಿಸಿದೆ. ಈ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಲು ಆರ್‌ಬಿಐ ನಿರಾಕರಿಸಿದೆ.

ಸರ್ಕಾರಕ್ಕೆ ಎಚ್ಚರಿಕೆ: ಪಟೇಲ್‌ ರಾಜೀನಾಮೆ ನೀಡಿದರೆ, ದುರ್ಬಲವಾಗಿರುವ ಹಣಕಾಸು ಮಾರುಕಟ್ಟೆಯಲ್ಲಿ ಇನ್ನಷ್ಟು ಅನಿಶ್ಚಿತ ವಾತಾವರಣ ಸೃಷ್ಟಿಸುವುದಾಗಿ ಹೂಡಿಕೆದಾರರು ಮತ್ತು ವರ್ತಕರು ಎಚ್ಚರಿಕೆ ನೀಡಿದ್ದಾರೆ.

**

ರಾಜನ್‌ ಬೆಂಬಲ

ಮಾಜಿ ಗವರ್ನರ್ ರಘುರಾಂ ರಾಜನ್‌ ಅವರು ಆರ್‌ಬಿಐ ಬೆಂಬಲಕ್ಕೆ ನಿಂತಿದ್ದಾರೆ. ಆರ್‌ಬಿಐ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಯಾರದೇ ಹಿತಾಸಕ್ತಿಗೆ ಒಳಗಾಗದೆ, ದೇಶದ ಹಿತದೃಷ್ಟಿ ಮತ್ತು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಅದು ಹೊಂದಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು