ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರ ಮತ್ತೆ ಶೇ 0.50 ಹೆಚ್ಚಳ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಣೆ

Last Updated 8 ಜೂನ್ 2022, 17:57 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಬುಧವಾರ ಶೇಕಡ 0.50ರಷ್ಟು ಹೆಚ್ಚಿಸಿದ್ದು, ಗೃಹ, ವಾಹನ ಹಾಗೂ ಇತರ ಸಾಲಗಳ ಬಡ್ಡಿ ದರ ಇನ್ನಷ್ಟು ಜಾಸ್ತಿ ಆಗಲಿದೆ. ಹಣದುಬ್ಬರ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸುತ್ತಿರುವುದು ಐದು ವಾರಗಳ ಅವಧಿಯಲ್ಲಿ ಇದು ಎರಡನೆಯ ಬಾರಿ.

ರೆಪೊ ದರದಲ್ಲಿ ಬುಧವಾರ ಆಗಿರುವ ಹೆಚ್ಚಳವು ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿನ ಅತಿದೊಡ್ಡ ಏರಿಕೆ. ಈಗ ರೆಪೊ ದರವು ಶೇ 4.90ಕ್ಕೆ ತಲುಪಿದೆ. ಮೇ ತಿಂಗಳಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 0.40ರಷ್ಟು ಜಾಸ್ತಿ ಮಾಡಿತ್ತು.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ತಾಳಿದ್ದ ‘ಹೊಂದಾಣಿಕೆಯ ಹಣಕಾಸಿನ ನಿಲುವನ್ನು’ ಆರ್‌ಬಿಐ ಕೈಬಿಟ್ಟಿದೆ. ಅಂದರೆ, ಮುಂದಿನ ದಿನಗಳಲ್ಲಿ ಹಣದುಬ್ಬರ ನಿಯಂತ್ರಿಸಲು ರೆಪೊ ದರವನ್ನು ಇನ್ನಷ್ಟು ಜಾಸ್ತಿ ಮಾಡುವ ಸಾಧ್ಯತೆ ಇದೆ. ‘ಹಣದುಬ್ಬರ ಪ್ರಮಾಣವು ಗರಿಷ್ಠ ಮಟ್ಟಕ್ಕಿಂತ (ಶೇ 6) ಜಾಸ್ತಿ ಇದೆ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತವಾಗಿ ಮೂರು ತ್ರೈಮಾಸಿಕಗಳಲ್ಲಿ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದರೆ, ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಏನು ಎಂಬುದನ್ನು ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ತಿಳಿಸಬೇಕಾಗುತ್ತದೆ.

ಹಣಕಾಸು ನೀತಿಯಿಂದ ‘ಹೊಂದಾಣಿಕೆಯ’ ಪದವನ್ನು ಕೈಬಿಡಲಾಗಿದೆ. ಆದರೆ, ‘ನಾವು ಹೊಂದಾಣಿಕೆಯ ನಿಲುವನ್ನು ಹೊಂದಿರುತ್ತೇವೆ’ ಎಂದು ಕೂಡ ದಾಸ್ ಹೇಳಿದ್ದಾರೆ. ದೇಶದ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಬೆಳವಣಿಗೆ ದರವು ಶೇ 7.2ರಷ್ಟು ಇರಲಿದೆ ಎಂಬ ಅಂದಾಜಿನಲ್ಲಿ ಬದಲಾವಣೆ ಮಾಡಿಲ್ಲ.

ಬುಧವಾರದ ಏರಿಕೆಯ ನಂತರವೂ ರೆಪೊ ದರವು ಕೊವಿಡ್‌ ಪೂರ್ವದ ಮಟ್ಟಕ್ಕಿಂತ (ಶೇ 5.15) ಕಡಿಮೆ ಇದೆ. 2020ರ ಮಾರ್ಚ್‌ನಿಂದ ಮೇ ನಡುವೆ ಆರ್‌ಬಿಐ ರೆಪೊ ದರವನ್ನು ಶೇ 1.15ರಷ್ಟು ಕಡಿಮೆ ಮಾಡಿತ್ತು.

*
ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪ್ರಮಾಣವನ್ನು ಮತ್ತಷ್ಟು ತಗ್ಗಿಸುವುದರಿಂದ ಹಣದುಬ್ಬರದ ಒತ್ತಡ ಇನ್ನಷ್ಟು ಕಡಿಮೆಯಾಗುವುದು ಖಚಿತ.
–ಶಕ್ತಿಕಾಂತ ದಾಸ್, ಆರ್‌ಬಿಐ ಗವರ್ನರ್

‘ಹಣದುಬ್ಬರದ ಮೇಲೆ ಪರಿಣಾಮ‌ ಕಡಿಮೆ’
ನವದೆಹಲಿ:
ಆರ್‌ಬಿಐ ಕೈಗೊಂಡಿರುವ ಕ್ರಮದಿಂದ ಹಣದುಬ್ಬರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಕೇಂದ್ರದ ಮಾಜಿ ಹಣಕಾಸು ಕಾರ್ಯದರ್ಶಿ ಎಸ್.ಸಿ. ಗರ್ಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕೃಷಿ ಉತ್ಪನ್ನಗಳು, ಅದರಲ್ಲೂ ಮುಖ್ಯವಾಗಿ ಆಹಾರ ಉತ್ಪನ್ನಗಳು, ಇಂಧನ, ಸಾರಿಗೆ, ಸಂವಹನ ವೆಚ್ಚಗಳು, ಮನೆ ಬಾಡಿಗೆ, ಆರೋಗ್ಯ ಮತ್ತು ಶಿಕ್ಷಣ ಸೇವಾ ವೆಚ್ಚಗಳು ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಪ್ರಮುಖವಾಗಿ ತೀರ್ಮಾನಿಸುತ್ತವೆ’ ಎಂದು ಅವರು ವಿವರಿಸಿದ್ದಾರೆ.

ಆರ್‌ಬಿಐ ಕೈಗೊಂಡಿರುವ ತೀರ್ಮಾನಗಳು ಸಾಲ ನೀಡುವುದರ ಮೇಲೆ ಪರಿಣಾಮ ಬೀರುತ್ತವೆ. ಚಿಲ್ಲರೆ ಹಣದುಬ್ಬರಕ್ಕೆ ಕಾರಣವಾಗುವ ಉತ್ಪನ್ನಗಳು, ಸೇವೆಗಳ ಬಳಕೆದಾರರು ಹಾಗೂ ಅವುಗಳನ್ನು ನೀಡುವವರು ಸಾಲ ಪಡೆಯುವ ಪ್ರಮಾಣ ಕಡಿಮೆ. ಹೀಗಾಗಿ, ಆರ್‌ಬಿಐ ತೀರ್ಮಾನವು ಹಣದುಬ್ಬರದ ಮೇಲೆ ಪರಿಣಾಮ ಬೀರದು ಎಂದು ಅವರು ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT