ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 6ನೇ ಬಾರಿಗೆ ರೆಪೊ ದರ ಯಥಾಸ್ಥಿತಿ: RBI

Published 8 ಫೆಬ್ರುವರಿ 2024, 5:27 IST
Last Updated 8 ಫೆಬ್ರುವರಿ 2024, 5:27 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, ಸತತ ಆರನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಜಾಗತಿಕ ಆರ್ಥಿಕ ಬೆಳವಣಿಗೆ ಕುರಿತು ಎದುರಾಗಿರುವ ಅನಿಶ್ಚಿತ ಪರಿಸ್ಥಿತಿ ಹಾಗೂ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿಯೇ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡುವ ದೃಷ್ಟಿಯಿಂದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಅಧ್ಯಕ್ಷತೆಯ ಸಮಿತಿಯು ಗುರುವಾರ ಈ ನಿರ್ಧಾರ ಕೈಗೊಂಡಿದೆ.

ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳಲು ಸಮಿತಿಯ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2023ರ ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಶೇ 6.25ರಿಂದ ಶೇ 6.5ಕ್ಕೆ ಹೆಚ್ಚಿಸಲಾಗಿತ್ತು.

ರೆಪೊ ದರ ಇಳಿಕೆಯಾದರೆ ಗೃಹ ಸಾಲದ ಬಡ್ಡಿದರ ಕಡಿಮೆಯಾಗಲಿದ್ದು ಇಎಂಐ ಹೊರೆಯು ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಗೃಹ ಸಾಲಗಾರರು ಮತ್ತೆ ನಿರಾಸೆ ಅನುಭವಿಸುವಂತಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಕ್ತಿಕಾಂತ ದಾಸ್‌, ‘ಆರ್‌ಬಿಐ ಅಂದಾಜಿಸಿರುವ ಮಿತಿಯೊಳಗೆ ಹಣದುಬ್ಬರವು ನಿಯಂತ್ರಣಕ್ಕೆ ಬರುವವರೆಗೂ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸಮಿತಿಯು ನಿರ್ಧರಿಸಿದೆ’ ಎಂದು ಸ್ಪಷ್ಟಪಡಿಸಿದರು.

ಮುಂದಿನ ಸಭೆಯು ಏಪ್ರಿಲ್‌ 3ರಿಂದ 5ರ ವರೆಗೆ ನಡೆಯಲಿದೆ.

ಹಣದುಬ್ಬರ ಶೇ 4.5ಕ್ಕೆ ಇಳಿಕೆ ನಿರೀಕ್ಷೆ

ದೇಶದಲ್ಲಿ 2023–24ನೇ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5.4ರಷ್ಟು ಇರಲಿದ್ದು 2024–25ನೇ ಹಣಕಾಸು ವರ್ಷದಲ್ಲಿ ಶೇ 4.5ಕ್ಕೆ ಇಳಿಕೆಯಾಗಲಿದೆ ಎಂದು ಹಣಕಾಸು ನೀತಿ ಸಮಿತಿ ಅಂದಾಜಿಸಿದೆ.

‘ಆಹಾರ ವಸ್ತುಗಳ ಬೆಲೆ ಏರಿಕೆಯೇ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿನ ಸಂಘರ್ಷಗಳು ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರುತ್ತವೆ. ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಅಸ್ಥಿರತೆಯೂ ಹಣದುಬ್ಬರದ ಏರಿಕೆಗೆ ಕಾರಣವಾಗಲಿದೆ. ಈ ವಿದ್ಯಮಾನದ ಮೇಲೆ ಸಮಿತಿಯು ನಿಗಾವಹಿಸಿದೆ’ ಎಂದು ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

‘ದೇಶದಲ್ಲಿ ರಾಬಿ ಅವಧಿಯ ಬಿತ್ತನೆ ಚೇತರಿಕೆ ಕಂಡಿದೆ. ಇದು ಹಣದುಬ್ಬರದ ನಿಯಂತ್ರಣಕ್ಕೆ ನೆರವಾಗಬಹುದು’ ಎಂದಿದ್ದಾರೆ. 2023ರ ಅಕ್ಟೋಬರ್‌ನಲ್ಲಿ ಶೇ 4.9ರಷ್ಟು ಕನಿಷ್ಠ ಮಟ್ಟದಲ್ಲಿ ದಾಖಲಾಗಿದ್ದ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 5.7ರಷ್ಟು ಏರಿಕೆಯಾಗಿತ್ತು. ಆಹಾರ ಪದಾರ್ಥಗಳು ಮತ್ತು ತರಕಾರಿ ಬೆಲೆ ಹೆಚ್ಚಳವು ಇದಕ್ಕೆ ಕಾರಣವಾಗಿತ್ತು.

ಜಿಡಿಪಿ ಶೇ 7 ಬೆಳವಣಿಗೆ ಅಂದಾಜು

2024–25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಸಮಿತಿಯು ಅಂದಾಜಿಸಿದೆ.  2023–24ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯು ಶೇ 7.3ರಷ್ಟು ಇರಲಿದೆ ಎಂದು ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್‌ಎಸ್‌ಒ) ಅಂದಾಜಿಸಿದೆ.‌

‘ದೇಶೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಯು ಸದೃಢವಾಗಿದೆ. ಹೂಡಿಕೆ ವಲಯದ ಚಟುವಟಿಕೆಗಳು ಚೇತರಿಕೆ ಪಡೆದಿವೆ. ಹಾಗಾಗಿ ಸಾಂಖಿಕ್ಯ ಕಚೇರಿಯು ಈ ಅಂದಾಜು ಮಾಡಿದೆ’ ಎಂದು ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ತಯಾರಿಕಾ ಮತ್ತು ಉತ್ಪಾದನಾ ವಲಯದಲ್ಲಿನ ಚಟುವಟಿಕೆಗಳು ಕ್ಷಿಪ್ರಗತಿಯಲ್ಲಿವೆ. ಹಾಗಾಗಿ 2023–24ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಒಟ್ಟು ಆಂತರಿಕ ಉತ್ಪನ್ನದಲ್ಲಿನ ಒಟ್ಟು ಮೌಲ್ಯ ವರ್ಧನೆಯು (ಜಿವಿಎ) ಶೇ 6.9ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT