ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ₹ 99,122 ಕೋಟಿ ಲಾಭಾಂಶ: ಆರ್‌ಬಿಐ ನಿರ್ಧಾರ

Last Updated 21 ಮೇ 2021, 14:48 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರ ಸರ್ಕಾರಕ್ಕೆಲಾಭಾಂಶದ ರೂಪದಲ್ಲಿ ₹ 99,122 ಕೋಟಿ ಮೊತ್ತವನ್ನು ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ನಿರ್ಧರಿಸಿದೆ. ಈ ಕ್ರಮದಿಂದಾಗಿ ಕೋವಿಡ್‌–19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಒಂದಿಷ್ಟು ನೆರವಾಗಲಿದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ, 2021ರ ಮಾರ್ಚ್‌ 31ಕ್ಕೆ ಕೊನೆಗೊಂಡ ಒಂಭತ್ತು ತಿಂಗಳ ಲೆಕ್ಕಪತ್ರ ಅವಧಿಗೆ ಸಂಬಂಧಿಸಿದಂತೆ ಈ ಮೊತ್ತವನ್ನು ವರ್ಗಾಯಿಸಲು ನಿರ್ಧರಿಸಲಾಯಿತು.

ಜುಲೈ–ಜೂನ್‌ ಅವಧಿಯನ್ನು ‘ಲೆಕ್ಕಪತ್ರ ಅವಧಿ’ ಎಂದು ಈ ಮೊದಲು ಪರಿಗಣಿಸುತ್ತಿದ್ದ ಆರ್‌ಬಿಐ, ಈಗ ಏಪ್ರಿಲ್‌ನಿಂದ ಮಾರ್ಚ್ ಅಂತ್ಯದವರೆಗಿನ ‘ಹಣಕಾಸು ವರ್ಷ’ವನ್ನೇ ತನ್ನ ‘ಲೆಕ್ಕಪತ್ರ ಅವಧಿ’ ಎಂದು ಪರಿಗಣಿಸಲು ಆರಂಭಿಸಿದೆ.

2019–20ರ ಲೆಕ್ಕಪತ್ರ ಅವಧಿಯಲ್ಲಿ ₹ 57,128 ಕೋಟಿ ಹಣವನ್ನುಕೇಂದ್ರ ಸರ್ಕಾರಕ್ಕೆ ಆರ್‌ಬಿಐ ವರ್ಗಾಯಿಸಿದೆ. 2018–19ರಲ್ಲಿ ಆರ್‌ಬಿಐನಿಂದ ಕೇಂದ್ರ ಸರ್ಕಾರಕ್ಕೆ ₹ 1.23 ಲಕ್ಷ ಕೋಟಿ ಲಾಭಾಂಶ ಸಿಕ್ಕಿತ್ತು. ಇದರ ಜೊತೆಯಲ್ಲೇ, ₹ 52,637 ಕೋಟಿ ಹೆಚ್ಚುವರಿ ಮೊತ್ತವನ್ನು (ಒಟ್ಟು ಮೊತ್ತ ₹ 1.76 ಲಕ್ಷ ಕೋಟಿ) ಕೂಡ ಆ ವರ್ಷ ಆರ್‌ಬಿಐ ವರ್ಗಾವಣೆ ಮಾಡಿತ್ತು.

ಬಿಮಲ್ ಜಲನ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಮೀಸಲು ನಿಧಿಯಾಗಿ ಶೇಕಡ 5.5ರಷ್ಟು ಮೊತ್ತವನ್ನು ಇರಿಸಿಕೊಳ್ಳಲು ಕೂಡ ಆರ್‌ಬಿಐ ತೀರ್ಮಾನಿಸಿದೆ. ಮೀಸಲು ನಿಧಿಯ ಪ್ರಮಾಣವು ಶೇ 6.5ರಿಂದ ಶೇ 5.5ರ ನಡುವೆ ಇರಬೇಕು ಎಂದು ಸಮಿತಿಯು ಶಿಫಾರಸು ಮಾಡಿತ್ತು.

ಸದ್ಯದ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶಿ ಸವಾಲುಗಳು ಹಾಗೂ ಆರ್ಥಿಕತೆಯ ಮೇಲೆ ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯ ಪರಿಣಾಮಗಳನ್ನು ತಡೆಯಲು ಆರ್‌ಬಿಐ ಕೈಗೊಂಡಿರುವ ಇತ್ತೀಚಿನ ಕ್ರಮಗಳ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

2021–22ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ತನಗೆ ಆರ್‌ಬಿಐ, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಬರುವ ಲಾಭಾಂಶವು ₹ 53,510 ಕೋಟಿ ಎಂದು ಅಂದಾಜಿಸಿತ್ತು. ಈಗ ಅಂದಾಜಿಗಿಂತ ಹೆಚ್ಚಿನ ಮೊತ್ತವು ಆರ್‌ಬಿಐ ಕಡೆಯಿಂದಲೇ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT