ಸೋಮವಾರ, ಆಗಸ್ಟ್ 2, 2021
26 °C
ಹೊಸ ಯೋಜನೆ ಸ್ಥಗಿತ ನಿರ್ಧಾರಕ್ಕೆ ಉದ್ಯಮ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ

ಅತೀವ ಪರಿಣಾಮ: ಕಾಸಿಯಾ ಆತಂಕ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ಹೊಸ ಕಾರ್ಯಕ್ರಮಗಳನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯದ ಉದ್ದಿಮೆ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಇದರಿಂದ ಗಂಭೀರ ಸ್ವರೂಪದ ಪರಿಣಾಮಗಳು ಉಂಟಾಗಲಿವೆ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಆತಂಕ ವ್ಯಕ್ತಪಡಿಸಿದೆ. ಸದ್ಯದ ಸನ್ನಿವೇಶದಲ್ಲಿ ಹಳೆ ಮತ್ತು ಹೊಸ ಯೋಜನೆಗಳನ್ನು ಅರ್ಧಮರ್ಧಗೊಳಿಸುವ ಬದಲಿಗೆ ಹೊಸ ಯೋಜನೆ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ. ಇದರಿಂದ ಹಳೆಯ ಯೋಜನೆಗಳಿಗೆ ವೇಗ ದೊರೆಯಲಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಪ್ರತಿಕ್ರಿಯಿಸಿದೆ. ಸದ್ಯದ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಮುಂದೂಡಿರುವುದು ಸರಿಯಾದ ನಿರ್ಧಾರವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ ರಾಜ್ಯ ಘಟಕವು ತಿಳಿಸಿದೆ.

ಅತೀವ ಪರಿಣಾಮ: ‘ಹೊಸ ಯೋಜನೆಗಳನ್ನು ಸ್ಥಗಿತಗೊಳಿಸುವುದರಿಂದ ಸಣ್ಣ ಕೈಗಾರಿಕಾ ವಲಯದ (ಎಂಎಸ್‌ಎಂಇ) ಮೇಲೆ  ಅತೀವ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಸರಕುಗಳಿಗೆ ಖರೀದಿಯೇ ಇಲ್ಲದ ಸಂದರ್ಭದಲ್ಲಿನ ಈ ನಿರ್ಧಾರವು ಇನ್ನೊಂದು ಹೊಡೆತ ರೂಪದಲ್ಲಿ ಉದ್ದಿಮೆ ಪಾಲಿಗೆ ಮಾರಕವಾಗಿ ಪರಿಣಮಿಸಲಿದೆ. ಮಂದಗತಿಯ ಆರ್ಥಿಕತೆ, ಕೋವಿಡ್‌ ಪೆಟ್ಟು ನಂತರದ ಈ ನಿರ್ಧಾರವನ್ನು ಸಣ್ಣ ಕೈಗಾರಿಕಾ ವಲಯವು ತಾಳಿಕೊಳ್ಳಲು ಆಗದಂತಹ ಪರಿಸ್ಥಿತಿ ಉದ್ಭವಿಸಲಿದೆ’ ಎಂದು ಕಾಸಿಯಾ ಅಧ್ಯಕ್ಷ  ಆರ್‌. ರಾಜು ಹೇಳಿದ್ದಾರೆ.

ಸ್ವಾಗತಾರ್ಹ: ‘ಹಣಕಾಸು ಬಿಕ್ಕಟ್ಟಿನ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ತ್ವರಿತಗತಿಯ ಆರ್ಥಿಕ ಪ್ರಗತಿ ಸಾಧಿಸಲು ಹೊಸ ಯೋಜನೆಗಳು ತುಂಬ ಅಗತ್ಯ. ಸದ್ಯದ ಸನ್ನಿವೇಶದಲ್ಲಿ ಈ ನಿರ್ಧಾರವು ಸಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುವ ಆಶಾವಾದ ಇದೆ’ ಎಂದು ’ಎಫ್‌ಕೆಸಿಸಿಐ’ ಅಧ್ಯಕ್ಷ ಜನಾರ್ಧನ್‌ ಅವರು ಹೇಳಿದ್ದಾರೆ.

ಸಮಯೋಚಿತ ನಿರ್ಧಾರ: ‘ಹೊಸ ಯೋಜನೆಗಳನ್ನು ಮುಂದೂಡಿರುವುದು ಸರಿಯಾದ ನಿರ್ಧಾರವಾಗಿದೆ. ಸರ್ಕಾರದ ಬಳಿ ದುಡ್ಡೇ ಇಲ್ಲ. ಈ ವರ್ಷ ತೆರಿಗೆ ಸಂಗ್ರಹವೂ ಕುಸಿಯಲಿದೆ. ಹೀಗಾಗಿ ಯೋಜನೆಗಳನ್ನು ಮುಂದೂಡುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ‘ಅಸೋಚಾಂ’ನ ರಾಜ್ಯ ಘಟಕದ ಅಧ್ಯಕ್ಷ ಸಂಪತ್‌ ರಾಮನ್‌ ಹೇಳಿದ್ದಾರೆ.

ಬಾಕಿ ಪಾವತಿಗೆ ಚುರುಕು:  ‘ಎಂಎಸ್‌ಎಂಇ’ಗಳಿಗೆ ಸರ್ಕಾರ  ₹ 6 ಲಕ್ಷ ಕೋಟಿ ಮೊತ್ತದ ಬಾಕಿ ಪಾವತಿಸಬೇಕಾಗಿದೆ. ಅವಸಾನದ ಅಂಚಿನಲ್ಲಿಇರುವ ‘ಎಂಎಸ್‌ಎಂಇ’ಗಳಿಗೆ ಶಕ್ತಿ ತುಂಬಲು  ಬಾಕಿ ಹಣ ಮರು ಪಾವತಿ ಮಾಡಲು ಸರ್ಕಾರ ಈ ನಿರ್ಧಾರಕ್ಕೆ ಬಂದಿರುವಂತೆ ಭಾಸವಾಗುತ್ತದೆ’ ಎಂದು ‘ಫಿಕ್ಕಿ’ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜೆ. ಕ್ರಾಸ್ತಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು