ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌: ತಿಂಗಳ ವಂತಿಗೆ ಕಡಿತಕ್ಕೆ ಅವಕಾಶ

ಲೋಕಸಭೆಯಲ್ಲಿ ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ ಮಂಡನೆ
Last Updated 12 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಸುರಕ್ಷತಾ ಪ್ರಯೋಜನಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದ ಮತ್ತು ಭವಿಷ್ಯ ನಿಧಿಗೆ (ಪಿಎಫ್‌) ಉದ್ಯೋಗಿಗಳ ತಿಂಗಳ ವಂತಿಗೆಯನ್ನು ಕಡಿತಗೊಳಿಸಲು ಆಯ್ಕೆ ಅವಕಾಶ ಇರುವ ‘ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ–2019’ ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಉದ್ಯೋಗಿಗಳ ಸಾಮಾಜಿಕ ಸುರಕ್ಷತೆಗೆ ಸಂಬಂಧಿಸಿದ ಒಂಬತ್ತು ಕಾಯ್ದೆಗಳ ವಿಲೀನ ಮತ್ತು ತಿದ್ದುಪಡಿ ಉದ್ದೇಶದ ಈ ಮಸೂದೆಯನ್ನು ಕಾರ್ಮಿಕ ಸಚಿವ ಸಂತೋಷ್‌ ಕುಮಾರ್ ಗಂಗ್ವಾರ್‌ ಅವರು ಮಂಡಿಸಿದ್ದಾರೆ.

ಸ್ಥಿರ ಅವಧಿಯ ಉದ್ಯೋಗಿಗಳು ಒಂದು ವರ್ಷದ ಸೇವಾವಧಿ ಪೂರ್ಣಗೊಳಿಸುತ್ತಿದ್ದಂತೆ ಅವರಿಗೆ ಗ್ರಾಚ್ಯುಟಿ ಒದಗಿಸುವುದು ಈ ಸಂಹಿತೆಯ ಇನ್ನೊಂದು ಪ್ರಮುಖ ಸಂಗತಿಯಾಗಿದೆ. ಸದ್ಯಕ್ಕೆ 5 ವರ್ಷಗಳ ಸೇವಾವಧಿ ಪೂರ್ಣಗೊಳಿಸಿದವರಿಗೆ ಈ ಸೌಲಭ್ಯ ಅನ್ವಯವಾಗುತ್ತಿತ್ತು.

ಉದ್ಯೋಗಿಗಳು ಭವಿಷ್ಯ ನಿಧಿಗೆ (ಪಿಎಫ್‌) ಪ್ರತಿ ತಿಂಗಳೂ ತಾವು ಪಾವತಿಸುವ ವಂತಿಗೆಯನ್ನು ಕಡಿಮೆ ಮಾಡಿ ಮನೆಗೆ ಹೆಚ್ಚು ಸಂಬಳ ತೆಗೆದುಕೊಂಡು ಹೋಗುವ ಆಯ್ಕೆ ಅವಕಾಶವನ್ನು ಈ ಮಸೂದೆ ಒದಗಿಸಿಕೊಡಲಿದೆ. ‘ಪಿಎಫ್‌ಗೆ’ ಶಾಸನಬದ್ಧವಾಗಿ ವಂತಿಗೆ ಸಲ್ಲಿಸುವ ಮೂಲವೇತನದ ಶೇ 12ರಷ್ಟು ಮೊತ್ತವನ್ನು ಶೇ 9ರವರೆಗೆ ಕಡಿಮೆ ಮಾಡಲು ಉದ್ಯೋಗಿಗಳಿಗೆ ಆಯ್ಕೆ ಅವಕಾಶ ನೀಡಲು ಸರ್ಕಾರ ಉದ್ದೇಶಿಸಿದೆ.

ಸಾಮಾಜಿಕ ಸುರಕ್ಷತಾ ನಿಧಿ

ಅಸಂಘಟಿತ ವಲಯದ ಕಾರ್ಮಿಕರಿಗೆ ವೈದ್ಯಕೀಯ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಾಮಾಜಿಕ ಸುರಕ್ಷತಾ ನಿಧಿ ಮತ್ತು ಕಾರ್ಪೊರೇಟ್‌ಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಸ್ಥಾಪಿಸಲು ಈ ಮಸೂದೆಯು ಅವಕಾಶ ಮಾಡಿಕೊಡಲಿದೆ. ಈ ಅನುಕೂಲತೆಗಳನ್ನು ಉದ್ಯೋಗಿಗಳ ರಾಜ್ಯ ವಿಮೆ ನಿಗಮದ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ.

ಕೆಲವು ಆಯ್ದ ಉದ್ದಿಮೆಗಳನ್ನು ಈ ಸಂಹಿತೆಯ ಎಲ್ಲ ಅಥವಾ ಕೆಲವು ಪ್ರಸ್ತಾವಗಳಿಂದ ವಿನಾಯ್ತಿ ನೀಡಲೂ ಈ ಮಸೂದೆಯು ಸರ್ಕಾರಕ್ಕೆ ಅಧಿಕಾರ ನೀಡಲಿದೆ.

ಕಾಯ್ದೆಗಳ ವಿಲೀನ

ಕಾರ್ಮಿಕರಿಗೆ ಸಂಬಂಧಿಸಿದ ಒಂಬತ್ತು ಕಾಯ್ದೆಗಳನ್ನು ವಿಲೀನಗೊಳಿಸಲಿದೆ. ಉದ್ಯೋಗಿಗಳ ಪರಿಹಾರ ಕಾಯ್ದೆ, ರಾಜ್ಯ ವಿಮೆ, ಭವಿಷ್ಯ ನಿಧಿ ಕಾಯ್ದೆ, ಗ್ರಾಚ್ಯುಟಿ ಪಾವತಿ, ಕಟ್ಟಡ ನಿರ್ಮಾಣ ಕೆಲಸಗಾರರ ಮತ್ತು ಅಸಂಘಟಿತ ಕೆಲಸಗಾರರ ಸಾಮಾಜಿಕ ಸುರಕ್ಷತೆ, ಉದ್ಯೋಗ ವಿನಿಮಯ ಕಾಯ್ದೆಗಳು ಇನ್ನು ಮುಂದೆ ‘ಸಾಮಾಜಿಕ ಸುರಕ್ಷತಾ ಸಂಹಿತೆ’ಯಡಿ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT