ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಸ್ಥಿರತೆ | ಸರ್ಕಾರಕ್ಕೆ ಸವಾಲು: ಕೇಂದ್ರ ಹಣಕಾಸು ಸಚಿವಾಲಯದ ವರದಿ

Published 25 ಏಪ್ರಿಲ್ 2024, 15:22 IST
Last Updated 25 ಏಪ್ರಿಲ್ 2024, 15:22 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರಕ್ಕೆ ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಪ್ರಮುಖ ಸವಾಲಾಗಿ ಪರಿಣಮಿಸಿದೆ. ವಿಶ್ವದ ಹಲವು ರಾಷ್ಟ್ರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ. 

ಗುರುವಾರ ಬಿಡುಗಡೆ ಮಾಡಿರುವ ಮಾಸಿಕ ವರದಿಯಲ್ಲಿ ಆಹಾರ ಹಣದುಬ್ಬರದ ಏರಿಕೆ ಕುರಿತು ಪ್ರಸ್ತಾಪಿಸಿದೆ. ತರಕಾರಿಗಳು ಮತ್ತು ಬೇಳೆಕಾಳುಗಳ ಬೆಲೆ ಹೆಚ್ಚಳವನ್ನು ಉಲ್ಲೇಖಿಸಿದೆ. ಜತೆಗೆ, ದರ ನಿಯಂತ್ರಣಕ್ಕೆ ಕೇಂದ್ರ ಕೈಗೊಂಡಿರುವ ಕ್ರಮಗಳನ್ನೂ ನಮೂದಿಸಿದೆ.

ಸರ್ಕಾರವು ಆಹಾರ ಪದಾರ್ಥಗಳನ್ನು ಕಾಪು ದಾಸ್ತಾನು ಮಾಡುತ್ತದೆ. ಧಾರಣೆ ಏರಿಕೆಯಾದಾಗ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಬೆಲೆ ನಿಯಂತ್ರಿಸುತ್ತಿದೆ ಎಂದು ವರದಿ ಹೇಳಿದೆ.

ಸದ್ಯ ದೇಶದಲ್ಲಿ ಬೆಲೆ ಸ್ಥಿರತೆಯಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬೆಳವಣಿಗೆ ಸದೃಢವಾಗಿದೆ. ಹಾಗಾಗಿ, ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆಯು ಉತ್ತಮ ಬೆಳವಣಿಗೆ ಕಾಣುವ ಭರವಸೆ ಮೂಡಿಸಿದೆ ಎಂದು ವಿವರಿಸಿದೆ.

ದೇಶದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. 2024–25ರಲ್ಲಿ ಜಿಡಿಪಿ ಬೆಳವಣಿಗೆ ಕುರಿತು ಆರ್‌ಬಿಐ ಸೇರಿ ಅಂತರರಾಷ್ಟ್ರೀಯ ಸಂಘಟನೆಗಳು ಪ್ರಕಟಿಸಿರುವ ವರದಿಗಳು ಸಕಾರಾತ್ಮಕವಾಗಿವೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯು ದೇಶದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿದ್ದು, ಶೇ 7.8ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.

ವಿಶ್ವದಲ್ಲಿ ಆರ್ಥಿಕ ಹಿಂಜರಿಕೆಯ ಭೀತಿ ಕ್ಷೀಣಿಸುತ್ತಿದೆ. ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಚೇತರಿಸಿಕೊಳ್ಳುತ್ತಿವೆ. ಇದರಿಂದ ಜಾಗತಿಕ ಆರ್ಥಿಕತೆ ಬೆಳವಣಿಗೆಯು ನಿಧಾನವಾಗಿ ಲಯಕ್ಕೆ ಮರಳುತ್ತಿದೆ ಎಂದು ವರದಿ ಹೇಳಿದೆ.

ಆದರೆ, ಜಾಗತಿಕ ಬಿಕ್ಕಟ್ಟು ಮುಂದುವರಿದಿದೆ. ಇಸ್ರೇಲ್‌ ಮತ್ತು ಇರಾನ್‌ ನಡುವೆ ತಲೆದೋರಿದ್ದ ಸಂಘರ್ಷವು ಉಲ್ಬಣಿಸುವ ಮುನ್ಸೂಚನೆ ನೀಡಿತ್ತು. ಸದ್ಯ ಉದ್ವಿಗ್ನತೆಯ ತೀವ್ರತೆ ತಗ್ಗಿದೆ. ಇದು ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಸೂಚಕವಾಗಿದೆ. ದೇಶದಲ್ಲಿ ಎಲ್ಲಾ ವಲಯಗಳ ಬೆಳವಣಿಗೆ ಸದೃಢವಾಗಿದೆ. ಆರ್ಥಿಕತೆ ಬೆಳವಣಿಗೆಯೂ ದೃಢವಾಗಿರುವುದರಿಂದ ಜಾಗತಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ವಿವರಿಸಿದೆ.

2023–24ನೇ ಸಾಲಿನಲ್ಲಿ ಜಾಗತಿಕ ಆರ್ಥಿಕತೆ ಪ್ರಗತಿಯು ಮಂದಗತಿಯಲ್ಲಿತ್ತು. ಇದು ದೇಶದ ವಾಣಿಜ್ಯ ಸರಕಿನ ರಫ್ತು ಮತ್ತು ಆಮದಿನ ಮೇಲೂ ಪರಿಣಾಮ ಬೀರಿತ್ತು. ರಫ್ತು ಪ್ರಮಾಣ ಕುಸಿದಿತ್ತು. ಆದಾಗ್ಯೂ ಪೆಟ್ರೋಲಿಯಂಯೇತರ ಉತ್ನನ್ನಗಳು, ಹರಳು ಮತ್ತು ಚಿನ್ನಾಭರಣ ರಫ್ತಿನಲ್ಲಿ ಚೇತರಿಕೆ ಕಂಡಿದೆ. ಸಾಫ್ಟ್‌ವೇರ್‌ ರಫ್ತಿನ ಹೆಚ್ಚಳದಿಂದಾಗಿ ಸೇವಾ ವಲಯದ ರಫ್ತು ಏರಿಕೆಯಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT