ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ: 9 ತಿಂಗಳ ಕನಿಷ್ಠ

ಆಹಾರ ಪದಾರ್ಥಗಳ ಬೆಲೆ ಇಳಿಕೆ: ಕೇಂದ್ರ ಸರ್ಕಾರಕ್ಕೆ ಪುಷ್ಟಿ
Published 12 ಏಪ್ರಿಲ್ 2024, 16:07 IST
Last Updated 12 ಏಪ್ರಿಲ್ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಒಂಬತ್ತು ತಿಂಗಳ ಕನಿಷ್ಠ ಮಟ್ಟವಾದ ಶೇ 4.85ಕ್ಕೆ ಇಳಿಕೆಯಾಗಿದೆ. 

ಆಹಾರ ಪದಾರ್ಥಗಳ ದರ ಕಡಿಮೆಯಾಗಿರುವುದೇ ಹಣದುಬ್ಬರದ ಇಳಿಕೆಗೆ ಕಾರಣವಾಗಿದೆ. ಬೆಲೆ ಇಳಿಕೆಯು ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪುಷ್ಟಿ ನೀಡಿದೆ. 

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 5.09ಕ್ಕೆ ಇಳಿಕೆಯಾಗಿತ್ತು. 2023ರ ಮಾರ್ಚ್‌ನಲ್ಲಿ ಹಣದುಬ್ಬರವು ಶೇ 5.66ರಷ್ಟು ದಾಖಲಾಗಿತ್ತು. ಅದೇ ವರ್ಷದ ಅಕ್ಟೋಬರ್‌ನಲ್ಲಿ ಶೇ 4.87ರಷ್ಟು ಕಡಿಮೆ ದಾಖಲಾಗಿತ್ತು.

ಫೆಬ್ರುವರಿಯಲ್ಲಿ ಶೇ 8.66ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 8.52‌ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಶುಕ್ರವಾರ ಬಿಡುಗಡೆ ಮಾಡಿರುವ ವರದಿ ವಿವರಿಸಿದೆ. 

ಶೇ 4ರ ಮಿತಿಗೆ ಹಣದುಬ್ಬರವನ್ನು ತಗ್ಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಹಲವು ಕ್ರಮಗಳನ್ನು ಕೈಗೊಂಡಿದೆ.

‘ಆಹಾರ ಪದಾರ್ಥಗಳ ಬೆಲೆಯು ಅನಿಶ್ಚಿತತೆಯಿಂದ ಕೂಡಿದೆ. ಹಾಗಾಗಿ, ಹಣದುಬ್ಬರವನ್ನು ನಿಗದಿತ ಮಿತಿಯಲ್ಲಿ ಕಾಯ್ದುಕೊಳ್ಳುವುದು ಸವಾಲಿನಿಂದ ಕೂಡಿದೆ’ ಎಂದು ಇತ್ತೀಚೆಗೆ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯು ಹೇಳಿತ್ತು. ಅಲ್ಲದೆ, ಮುಂಗಾರು ಸಾಮಾನ್ಯವಾಗಿರಲಿದ್ದು, 2024–25ನೇ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಇಸ್ರೇಲ್‌–ಪ್ಯಾಲೆಸ್ಟೀನ್‌, ರಷ್ಯಾ–ಉಕ್ರೇನ್‌ ಬಿಕ್ಕಟ್ಟು ಸರಕುಗಳ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಲಿದೆ ಎಂದು ಆರ್‌ಬಿಐ ಹೇಳಿದೆ.

2024–25ನೇ ಆರ್ಥಿಕ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 4.9ರಷ್ಟು ಹಾಗೂ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 3.8ರಷ್ಟು ಹಣದುಬ್ಬರ ದಾಖಲಾಗಲಿದೆ ಎಂದು ಅಂದಾಜಿಸಿದೆ.

ಗ್ರಾಮೀಣರಿಗೆ ಬೆಲೆ ಏರಿಕೆ ಬಿಸಿ

ಗ್ರಾಮೀಣ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದರೆ ನಗರ ಪ್ರದೇಶದ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ. ಫೆಬ್ರುವರಿಯಲ್ಲಿ ನಗರ ಪ್ರದೇಶದಲ್ಲಿ ಶೇ 5.45ರಷ್ಟಿದ್ದ ಹಣದುಬ್ಬರವು ಶೇ 4.14ರಷ್ಟಕ್ಕೆ ತಗ್ಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ 5.34ರಿಂದ ಶೇ 5.45ಕ್ಕೆ ಏರಿಕೆಯಾಗಿದೆ. ಒಡಿಶಾದಲ್ಲಿ ಅತಿಹೆಚ್ಚು ಹಣದುಬ್ಬರ (ಶೇ 7.05) ದಾಖಲಾಗಿದ್ದರೆ ನವದೆಹಲಿಯಲ್ಲಿ ಅತಿಕಡಿಮೆ (ಶೇ 2.29ರಷ್ಟು) ದಾಖಲಾಗಿದೆ.  ಮೊಟ್ಟೆ ಮಸಾಲೆ ಬೇಳೆಕಾಳು ಬೆಲೆಯಲ್ಲಿ ಇಳಿಕೆಯಾಗಿದ್ದರೆ ಹಣ್ಣುಗಳು ಮತ್ತು ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT