ಸೋಮವಾರ, ಆಗಸ್ಟ್ 2, 2021
24 °C

ರಿಲಯನ್ಸ್ ಜಿಯೊದಿಂದ ದೇಶೀಯ 5ಜಿ ನೆಟ್‌ವರ್ಕ್; ಗೂಗಲ್ ₹33,737 ಕೋಟಿ ಹೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ

ಬೆಂಗಳೂರು: ರಿಲಯನ್ಸ್‌ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ತಂತ್ರಜ್ಞಾನ ಕ್ಷೇತ್ರ ದೊಡ್ಡ ಸಂಸ್ಥೆಯಾಗಿರುವ ಗೂಗಲ್‌ ಹೂಡಿಕೆ ಮಾಡಿದೆ. 'ಗೂಗಲ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ₹33,737 ಕೋಟಿ ಹೂಡಿಕೆ ಮಾಡುವ ಮೂಲಕ ಶೇ 7.7ರಷ್ಟು ಪಾಲುದಾರಿಕೆ ಪಡೆಯಲಿದೆ' ಎಂದು ಮುಕೇಶ್‌ ಅಂಬಾನಿ ಬುಧವಾರ ಹೇಳಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸಭೆಯಲ್ಲಿ (ಎಜಿಎಂ) ಷೇರುದಾರರನ್ನು ಉದ್ದೇಶಿ ಮುಕೇಶ್‌ ಅಂಬಾನಿ ಮಾತನಾಡಿದರು. ದೇಶೀಯ ನಿರ್ಮಿತ 5ಜಿ ನೆಟ್‌ವರ್ಕ್‌ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಜಿಯೊ ಪ್ಲಾಟ್‌ಫಾರ್ಮ್‌ ಸುಮಾರು 20 ಸ್ಟಾರ್ಟ್‌–ಅಪ್‌ ಪಾಲುದಾರರೊಂದಿಗೆ ಜಾಗತಿಕ ಗುಣಮಟ್ಟದ 4ಜಿ ಮತ್ತು 5ಜಿ ತಂತ್ರಜ್ಞಾನಗಳ ಅಭಿವೃದ್ಧಿ ಪಡಿಸುವ ಸಾಮರ್ಥ್ಯ ಹೊಂದಿದೆ. ಕ್ಲೌಡ್‌ ಕಂಪ್ಯೂಟಿಂಗ್‌, ಸಾಧನಗಳು, ಒಎಸ್‌, ಬಿಗ್‌ ಡೇಟಾ, ಕೃತಕ ಬುದ್ಧಿಮತ್ತೆ (ಎಐ), ಎಆರ್‌/ವಿಆರ್‌, ಬ್ಲಾಕ್‌ಚೈನ್‌ ಸೇರಿದಂತೆ ಹಲವು ತಂತ್ರಜ್ಞಾನ ಅಭಿವೃದ್ಧಿ ಪಡುಸುವ ಸಾಮರ್ಥ್ಯ ಇರುವುದಾಗಿ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್‌ ಕಂಪನಿ ಹಕ್ಕಿನ ಷೇರುಗಳ ವಿತರಣೆ ಹಾಗೂ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿದೇಶಿ ಕಂಪನಿಗಳ ಹೂಡಿಕೆಗಳ ಮೂಲಕ ಒಟ್ಟು ₹2,12,809 ಕೋಟಿ ಸಂಗ್ರಹಿಸಿದೆ.

ಜಿಯೊ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲವನ್ನೂ ವಿನ್ಯಾಸಗೊಳಿಸಿದೆ ಹಾಗೂ ಅಭಿವೃದ್ಧಿ ಪಡಿಸಿದೆ. 5ಜಿ ತರಂಗಾಂತರ ಲಭ್ಯವಾಗುತ್ತಿದ್ದಂತೆ ಅದರ ಪರೀಕ್ಷೆ ನಡೆಯಲಿದೆ ಹಾಗೂ ಮುಂದಿನ ವರ್ಷದಲ್ಲಿ ಬಳಕೆ ತೆರೆದುಕೊಳ್ಳಲಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಯೊ 50 ಕೋಟಿ ಮೊಬೈಲ್‌ ಬಳಕೆದಾರರೊಂದಿಗೆ ಸಂಪರ್ಕ ಹೊಂದಿರಲಿದೆ ಎಂದು ಮುಕೇಶ್‌ ಅಂಬಾನಿ ಹೇಳಿದರು.

ಮಾರುಕಟ್ಟೆ ಮೌಲ್ಯ 150 ಬಿಲಿಯನ್‌ ಡಾಲರ್‌ ದಾಟಿದ ಭಾರತದ ಮೊದಲ ಕಂಪನಿ ರಿಲಯನ್ಸ್‌. ತೆರಿಗೆ, ಬಡ್ಡಿ ಕಡಿತಕ್ಕೂ ಮುನ್ನ ಕಂಪನಿಯ ಒಟ್ಟು ಆದಾಯ ₹1,00,000 ಕೋಟಿ ದಾಟಿದ ದೇಶದ ಕಂಪನಿಯಾಗಿದೆ.

'ಕಳೆದ ವರ್ಷದ ಭಾಷಣದಲ್ಲಿ ಪಾಲುದಾರಿಕೆಯೊಂದಿಗೆ ಉದ್ಯಮ ಬೆಳೆಸುವ ಕುರಿತು ಹಾಗೂ ಸಾಲಮುಕ್ತಗೊಳ್ಳುವ ಗುರಿಯ ಕುರಿತು ಪ್ರಸ್ತಾಪಿಸಿದ್ದೆ. ಈಗ ರಿಲಯನ್ಸ್‌ ಪೂರ್ಣ ಪ್ರಮಾಣದಲ್ಲಿ ಶೂನ್ಯ ಸಾಲ ಹೊಂದಿರುವ ಕಂಪನಿಯಾಗಿದೆ, 2021ರ ಮಾರ್ಚ್‌ಗೂ ಮುನ್ನವೇ ಗುರಿ ಸಾಧನೆಯಾಗಿದೆ' ಎಂದರು.

ನಮ್ಮ ಜಗತ್ತು ಹಿಂದಿನ 20 ಶತಮಾನಗಳಿಗಿಂತಲೂ ಮುಂದಿನ 8 ದಶಕಗಳಲ್ಲಿ ಅತಿ ಹೆಚ್ಚು ಬದಲಾವಣೆಯಾಗಲಿದೆ. ಭಾರತದ ಉದ್ಯಮಗಳು ಸೂಕ್ತ ತಂತ್ರಜ್ಞಾನ ಸೌಲಭ್ಯಗಳು ಹಾಗೂ ಸಾಧ್ಯತೆಗಳ ಬಲ ಹೊಂದಿದ್ದರೆ ಬದಲಾವಣೆಯ ನೇತೃತ್ವವನ್ನು ದೇಶ ವಹಿಸಬಹುದಾಗಿರುತ್ತದೆ. ಇದೇ ಜಿಯೊದ ಮಹತ್ವಾಕಾಂಕ್ಷೆಯಾಗಿದೆ ಎಂದು ಭವಿಷ್ಯ ಯೋಜನೆಗಳನ್ನು ವಿವರಸಿದರು.

ರಿಲಯನ್ಸ್‌ನ ಹಕ್ಕಿನ ಷೇರುಗಳ ವಿತರಣೆ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದೆ. ಲಾಕ್‌ಡೌನ್‌ ಅವಧಿಯಲ್ಲಿ ಯಾವುದೇ ಷೇರುದಾರ ಮನೆಯಿಂದ ಹೊರಬರದೆಯೇ ಷೇರು ಪಡೆಯಲು ಸಾಧ್ಯವಾಗಿದೆ. ಇದು ಡಿಜಿಟಲ್‌ ಯುಗದಲ್ಲಿ  ಭಾರತದ ಸಾಮರ್ಥ್ಯವನ್ನು ತೋರಿದೆ ಎಂದರು.  ಫೇಸ್‌ಬುಕ್‌, ಇಂಟೆಲ್‌ ಹಾಗೂ ಕ್ವಾಲ್‌ಕಾಮ್‌ ಸೇರಿದಂತೆ ಇತ್ತೀಚಿನ ಪ್ರಮುಖ ಹೂಡಿಕೆದಾರರನ್ನು ಆಹ್ವಾನಿಸಿದರು.

ಹಲವು ದಶಕಗಳಿಂದ ಟಿವಿ ಕಾರ್ಯಕ್ರಮಗಳು ಪ್ರಸಾರ ಮಾಡುವವರ ಮೇಲೆ ಅವಲಂಬಿತವಾಗಿತ್ತು. ಜಿಯೊಫೈಬರ್‌ ಮೂಲಕ ನಾವು ಟಿವಿ ವೀಕ್ಷಣೆಯ ಅನುಭವವನ್ನು ಬದಲಿಸಿದ್ದೇವೆ, ಅಗತ್ಯಕ್ಕೆ ತಕ್ಕಂತಹ ಟಿವಿ ಕಾರ್ಯಕ್ರಮ ವೀಕ್ಷಣೆ ಸಾಧ್ಯವಾಗಿಸಿದೆ. ಇನ್ನೂ ಜಿಯೊ ಡೆವಲಪರ್ಸ್‌ ಪ್ರೋಗ್ರಾಮ್‌ ಮೂಲಕ ಯಾವುದೇ ಆ್ಯಪ್‌ ಡೆವಲಪರ್‌ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಪಡಿಸಿ, ಬಿಡುಗಡೆ ಮಾಡಿ ಹಣ ಗಳಿಸಬಹುದು. ಜಿಯೊ ಜೊತೆಗೆ ಕೈಜೋಡಿಸಲು ಬಯಸುವವರು  http://developer.jio.comನಿಂದ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಆಕಾಶ್‌ ಅಂಬಾನಿ ಹೇಳಿದರು.

'ಜಿಯೊ ಗ್ಯಾಸ್‌' ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು 3ಡಿ ವರ್ಚುವಲ್‌ ರೂಂ ಮೂಲಕ ಒಟ್ಟಿಗೆ ತರಿಸುತ್ತದೆ. ಜಿಯೊ ಮಿಕ್ಸಡ್‌ ರಿಯಾಲಿಟಿ ಕ್ಲೌಡ್‌ ಮೂಲಕ ಹೊಲೊಗ್ರಾಫಿಕ್‌ ತರಗತಿಗಳನ್ನು ನಡೆಸಬಹುದು. ಭೂಗೋಳ ಕಲಿಕೆಯ ಪಾರಂಪರಿಕ ಮಾರ್ಗವು ಜಿಯೊ ಗ್ಲಾಸ್‌ನಿಂದ ಇತಿಹಾಸವಾಗಲಿದೆ ಎಂದು ಕಿರಣ್‌ ಥಾಮಸ್‌ ಹೇಳಿದರು.

ರಿಲಯನ್ಸ್‌ ಫೌಂಡೇಷನ್‌ ಹಾಸ್ಪಿಟಲ್‌ ಜಿಯೊಹೆಲ್ತ್‌ಹಬ್‌ ಪ್ಲಾಟ್‌ಫಾರ್ಮ್‌ ಮೂಲಕ ವರ್ಚುವಲ್ ಒಪಿಡಿ ಸೇವೆಗಳನ್ನು ನೀಡುತ್ತಿದೆ. ಕೋವಿಡ್‌ ದೃಢಪಟ್ಟ ರೋಗಿಗಳಿಗೆ ಹೋಂ ಕ್ವಾರಂಟೈನ್‌ ಸೇವೆಗಳನ್ನು ಬಿಡುಗಡೆ ಮಾಡಿದ್ದು, ಮೆನಗಳಿಂದಲೇ ಕಾಳಜಿ ಪಡೆಯಲು ಸಾಧ್ಯವಾಗಲಿದೆ ಎಂದು ಇಶಾ ಅಂಬಾನಿ ಹೇಳಿದರು.

ಜಿಯೊಮಾರ್ಟ್‌ ದಿನಸಿ, ತರಕಾರಿಗಳನ್ನು ಖರೀದಿಸುವ ವೇದಿಕೆ ಕಿರಾಣಿ ಅಂಗಡಿಗಳ ಸಹಯೋಗದೊಂದಿಗೆ ಯಶಸ್ವಿಯಾಗಿದೆ. ದೇಶದ 200 ನಗರಗಳಲ್ಲಿ ಜಿಯೊಮಾರ್ಟ್‌ ಬಳಕೆಯಾಗುತ್ತಿದೆ. ನಿತ್ಯ 2.5 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ದಾಖಲಾಗುತ್ತಿರುವುದಾಗಿ ಮುಕೇಶ್‌ ಅಂಬಾನಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು