ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದ ಕೆಲಸ ಅಪಾಯಕಾರಿ: ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಅಭಿಮತ

Last Updated 20 ಮೇ 2020, 2:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕಂಪನಿಗಳ ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವುದರಿಂದ ಅವರ ಸಾಮಾಜಿಕ ಸಂವಹನ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬರಲಿವೆ’ ಎಂದು ಮೈಕ್ರೊಸಾಫ್ಟ್‌ ಸಿಇಒ ಆಗಿರುವ ಭಾರತ ಸಂಜಾತ ಸತ್ಯ ನಾದೆಲ್ಲ ಹೇಳಿದ್ದಾರೆ.

ವಿಶ್ವದಾದ್ಯಂತ ಕಾರ್ಪೊರೇಟ್‌ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತ ತಮ್ಮ ವೃತ್ತಿಪರತೆಯ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾದೆಲ್ಲ ಅವರು ಈ ವ್ಯವಸ್ಥೆಯ ಪ್ರತಿಕೂಲತೆಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌–19’ ಪಿಡುಗು ಕೊನೆಗೊಂಡ ನಂತರವೂ ತನ್ನ ಉದ್ಯೋಗಿಗಳು ಶಾಶ್ವತ ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಟ್ವಿಟರ್‌ ಅನುಮತಿ ನೀಡಿದೆ. ಈ ವರ್ಷಾಂತ್ಯದವರೆಗೆ ಮನೆಯಿಂದಲೇ ಕೆಲಸ ಮಾಡಲು ಫೇಸ್‌ಬುಕ್‌, ಅಲ್ಫಾಬೆಟ್‌ (ಗೂಗಲ್‌) ಮತ್ತಿತರ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೇಳಿಕೊಂಡಿವೆ. ಅಕ್ಟೋಬರ್‌ವರೆಗೆ ಮನೆಯಿಂದ ಕೆಲಸ ನಿರ್ವಹಿಸಲು ಮೈಕ್ರೊಸಾಫ್ಟ್‌ ಕೂಡ ಕ್ರಮ ಕೈಗೊಂಡಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾದೆಲ್ಲ ಅವರು, ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

‘ಮನೆಯಿಂದ ಕೆಲಸ ಮಾಡುವುದರಿಂದ ಮೈಕ್ರೊಸಾಫ್ಟ್‌ ಸಿಬ್ಬಂದಿಯ ಉತ್ಪಾದಕತೆ ಹೆಚ್ಚಿರುವುದು ಅತಿಯಾಗಿ ಸಂಭ್ರಮಪಡುವ ಸಂಗತಿಯಲ್ಲ. ಮನೆಯಿಂದಲೇ ಕೆಲಸ ಮಾಡುವುದರಿಂದ, ಉದ್ಯೋಗಿಗಳು ಕಚೇರಿಯಲ್ಲಿ ಒಂದೆಡೆಯೇ ಕೆಲಸ ಮಾಡುತ್ತ, ಬದುಕುತ್ತ, ಇಡೀ ಸಮಾಜ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿರುವ ವ್ಯವಸ್ಥೆಯನ್ನು ಬಲಿ ಕೊಡಲಾಗುತ್ತಿದೆ. ಸ್ಪರ್ಶದ ಮಾಂತ್ರಿಕತೆಗೂ ವ್ಯಕ್ತಿಗಳು ಎರವಾಗುತ್ತಾರೆ. ವಿಡಿಯೊ ಕರೆಗಳು ಉದ್ಯೋಗಿಗಳು ಮುಖಾಮುಖಿಯಾಗಿ ಸಭೆ ನಡೆಸುವುದರ ಸ್ಥಾನವನ್ನು ಯಾವತ್ತೂ ತುಂಬುವುದಿಲ್ಲ. ಕಚೇರಿಯ ಮುಖಾಮುಖಿ ಸಭೆಗಳಲ್ಲಿ ಎದುರಿಗಿರುವ ವ್ಯಕ್ತಿಯ ಜತೆಗೆ ಸಭೆಯ ಮುಂಚೆ ಮತ್ತು ನಂತರ ಒಂದೆರಡು ನಿಮಿಷಗಳ ಉಭಯಕುಶಲೋಪರಿ ನಡೆಸುವುದಕ್ಕೆ ನಾನೀಗ ವಂಚಿತನಾಗಿದ್ದೇನೆ’ ಎಂದೂ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT