ಮಂಗಳವಾರ, ಜುಲೈ 27, 2021
27 °C

ಎಸ್‌ಬಿಐ: ಆಧಾರ್ ಬಳಸಿ ಉಳಿತಾಯ ಖಾತೆ ಆರಂಭಿಸುವ ಸೇವೆ ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಆಧಾರ್‌ ಬಳಸಿ ಉಳಿತಾಯ ಖಾತೆ ಆರಂಭಿಸುವ ಸೇವೆಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಪುನರಾರಂಭಿಸಿದೆ.

ಗ್ರಾಹಕರಿಗೆ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆಯ ಸೌಲಭ್ಯ ವಿಸ್ತರಿಸಲು ದೇಶದ ಅತಿದೊಡ್ಡ ಬ್ಯಾಂಕ್‌ ಈ ಸೌಲಭ್ಯಕ್ಕೆ ಮತ್ತೆ ಚಾಲನೆ ನೀಡಿದೆ.

ಗ್ರಾಹಕರು ಬ್ಯಾಂಕ್‌ನ  ಯೊನೊ ಸೌಲಭ್ಯ ಬಳಸಿಕೊಂಡು ಆಧಾರ್‌ ಆಧರಿಸಿ ತಕ್ಷಣಕ್ಕೆ ಉಳಿತಾಯ ಖಾತೆ ಆರಂಭಿಸುವ ಸೌಲಭ್ಯ ಇದಾಗಿದೆ.

ಡಿಜಿಟಲ್‌ ವಿಧಾನದ ಮೂಲಕ ಉಳಿತಾಯ ಖಾತೆ ಆರಂಭಿಸುವ ಈ ಪ್ರಕ್ರಿಯೆಯು ಸಂಪೂರ್ಣ ಕಾಗದರಹಿತವಾಗಿರುತ್ತದೆ. ಪ್ಯಾನ್‌ ಮತ್ತು ಆಧಾರ್ ಸಂಖ್ಯೆ ಬಳಸಿ ಗ್ರಾಹಕರು ಖಾತೆ ತೆರೆಯಬಹುದು.

ಗ್ರಾಹಕರು ಬ್ಯಾಂಕ್‌ ಶಾಖೆಗೆ ತೆರಳದೆ ಉಳಿತಾಯ ಖಾತೆ ಆರಂಭಿಸಬಹುದು. ಈ ಉಳಿತಾಯ ಖಾತೆ ಗ್ರಾಹಕರಿಗೆ ರೂಪೆ ಎಟಿಎಂ – ಡೆಬಿಟ್‌ ಕಾರ್ಡ್‌ ನೀಡಲಾಗುವುದು.

ಖಾತೆ ಆರಂಭಿಸುವ ವಿಧಾನ: ಡಿಜಿಟಲ್‌ ಖಾತೆ ಆರಂಭಿಸಲು ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ನ ಯೊನೊ (Yono) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಪ್ಯಾನ್‌ ಮತ್ತು ಆಧಾರ್‌ ವಿವರ ನೀಡಬೇಕು. ಮೊಬೈಲ್‌ಗೆ ಬರುವ ಒಟಿಪಿ ಸಲ್ಲಿಸಿ ಇತರ ವಿವರಗಳನ್ನು ಭರ್ತಿ ಮಾಡಬೇಕು.

ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಉಳಿತಾಯ ಖಾತೆ ಕಾರ್ಯಾರಂಭ ಮಾಡಲಿದೆ. ತಕ್ಷಣದಿಂದಲೇ ವಹಿವಾಟು ಆರಂಭಿಸಬಹುದು.  ಒಂದು ವರ್ಷದ ಒಳಗೆ ಗ್ರಾಹಕರು ತಮ್ಮ ಮನೆ ಸಮೀಪದ ಬ್ಯಾಂಕ್‌ ಶಾಖೆಗೆ ಭೇಟಿಕೊಟ್ಟು ‘ತಿಳಿಯಿರಿ ನಿಮ್ಮ ಗ್ರಾಹಕರು’ (ಕೆವೈಸಿ) ವಿವರಗಳನ್ನು ನೀಡಬೇಕು ಎಂದು ಬ್ಯಾಂಕ್‌ ತಿಳಿಸಿದೆ.

ಗ್ರಾಹಕರು ಶಾಖೆಗೆ ಭೇಟಿ ಕೊಡದೆ ಮನೆಯಲ್ಲಿ ಕುಳಿತುಕೊಂಡೇ ಸೇವಿಂಗ್ಸ್‌ ಅಕೌಂಟ್‌ ತೆರೆಯುವ ಸೌಲಭ್ಯ ಇದಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ  ರಜನೀಶ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು