ಶುಕ್ರವಾರ, ಮೇ 14, 2021
25 °C

ಕೋವಿಡ್–19: ಲಾಕ್‌ಡೌನ್‌ನಿಂದ ನಷ್ಟ, ಲಸಿಕೆಯಿಂದ ಲಾಭ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್–19 ತಡೆಯಲು ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಗೆ ತರುವುದಕ್ಕಿಂತಲೂ ತ್ವರಿತವಾಗಿ ಲಸಿಕೆ ನೀಡುವುದು ಕಡಿಮೆ ವೆಚ್ಚದ ಕೆಲಸ ಎಂದು ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಲಸಿಕೆ ನೀಡಲು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 0.1ರಷ್ಟು ಹಣ ಸಾಕಾಗುತ್ತದೆ. ಆದರೆ, ಲಾಕ್‌ಡೌನ್‌ಗಳಿಂದಾಗಿ ದೇಶವು ಜಿಡಿಪಿಯ ಶೇ 0.7ರಷ್ಟು ಮೊತ್ತವನ್ನು ಈಗಾಗಲೇ ಕಳೆದುಕೊಂಡಿದೆ ಎಂದು ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.‌

ಕೋವಿಡ್–19 ತಡೆಯಲು ಬೇರೆ ಬೇರೆ ರಾಜ್ಯಗಳು ನಿರ್ಬಂಧಗಳನ್ನು ಜಾರಿಗೆ ತರುತ್ತಿರುವ ಕಾರಣ ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದ ದೇಶದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಎಸ್‌ಬಿಐ ತಗ್ಗಿಸಿದೆ. ಜಿಡಿಪಿ ಬೆಳವಣಿಗೆ ಶೇಕಡ 11ರಷ್ಟು ಇರಲಿದೆ ಎಂದು ಈ ಮೊದಲು ಅಂದಾಜಿಸಿದ್ದ ಎಸ್‌ಬಿಐ, ಈಗ ಅದು ಶೇ 10.4 ಆಗಬಹುದು ಎಂದು ಹೇಳಿದೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಈಗ ಭಾಗಶಃ ಲಾಕ್‌ಡೌನ್‌, ಸ್ಥಳೀಯ ಮಟ್ಟದ ಲಾಕ್‌ಡೌನ್‌ ಅಥವಾ ವಾರಾಂತ್ಯದ ಲಾಕ್‌ಡೌನ್‌ ಜಾರಿಗೆ ಬಂದಿದೆ. ‘ಸೀಮಿತ ಪ್ರಮಾಣದ ಲಾಕ್‌ಡೌನ್‌ ಕ್ರಮಗಳಿಂದಾಗಿ ಆಗುವ ಒಟ್ಟು ನಷ್ಟ ಅಂದಾಜು ₹ 1.15 ಲಕ್ಷ ಕೋಟಿ’ ಎಂದು ಘೋಷ್ ಹೇಳಿದ್ದಾರೆ. ‘13 ದೊಡ್ಡ ರಾಜ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ನಾವು ಅಂದಾಜು ವೆಚ್ಚವನ್ನು ಲೆಕ್ಕ ಹಾಕಿದ್ದೇವೆ. ಇಷ್ಟೂ ರಾಜ್ಯಗಳಲ್ಲಿ ಜನರಿಗೆ ಲಸಿಕೆ ನೀಡಲು ಅಗತ್ಯವಿರುವ ಮೊತ್ತವು ಈ ರಾಜ್ಯಗಳ ಒಟ್ಟು ಜಿಡಿಪಿಯ ಶೇ 0.1ರಷ್ಟು ಆಗಲಿದೆ’ ಎಂದು ಘೋಷ್ ಅವರು ತಿಳಿಸಿದ್ದಾರೆ.

ಈ ರಾಜ್ಯಗಳ ಶೇ 50ರಷ್ಟು ಜನರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಲಸಿಕೆ ನೀಡಲಾಗುತ್ತದೆ ಎಂದು ಅಂದಾಜು ಮಾಡಿ ಘೋಷ್ ಅವರು ಈ ಲೆಕ್ಕ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಕ್ರಮಗಳು ಜಾರಿಗೆ ಬಂದ ಕಾರಣದಿಂದಾಗಿ ಏಪ್ರಿಲ್ 1ರಿಂದ 12ರ ನಡುವೆ ಅಂದಾಜು 4.32 ಲಕ್ಷ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ ಎಂದು ವರದಿ ಹೇಳಿದೆ.

ಲಸಿಕೆ ನೀಡುವ ವಿಚಾರದಲ್ಲಿ ದೇಶವು ದೊಡ್ಡ ಮುನ್ನಡೆ ಸಾಧಿಸಿದ್ದರೂ, ಇಸ್ರೇಲ್, ಚಿಲಿ ಹಾಗೂ ಬ್ರಿಟನ್‌ನಂತಹ ದೇಶಗಳಿಗಿಂತ ಹಿಂದೆ ಉಳಿದಿದೆ. ಭಾರತದ ಒಟ್ಟು ಜನಸಂಖ್ಯೆಯ ಶೇ 1.2ರಷ್ಟು ಜನರಿಗೆ ಮಾತ್ರ ಇದುವರೆಗೆ ಲಸಿಕೆ ನೀಡಲಾಗಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು