ಭಾನುವಾರ, ಆಗಸ್ಟ್ 25, 2019
23 °C
ಆರ್ಥಿಕತೆಯ ಚೇತರಿಕೆಗೆ ಕ್ರಮ: ಸರ್ಕಾರದ ಭರವಸೆ

ಪೇಟೆಯಲ್ಲಿ ಗೂಳಿ ಓಟ ಆರಂಭ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸುಮಾರು ಒಂದು ತಿಂಗಳಿನಿಂದ ಮಲಗ್ಗಿದ್ದ ಗೂಳಿ ಮೈಕೊಡವಿಕೊಂಡು ತನ್ನ ಓಟ ಆರಂಭಿಸಿದೆ.

ಆರ್ಥಿಕ ಪುನಶ್ಚೇತನಕ್ಕೆ ಅಗತ್ಯವಾದ ಕ್ರಮಗಳು ಮತ್ತು ತೆರಿಗೆ ಆತಂಕ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯಿತು.

ಆರ್ಥಿಕತೆಗೆ ಉತ್ತೇಜನ ನೀಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಉದ್ಯಮ ವಲಯದ ಸಮಸ್ಯೆಗಳನ್ನು ಬಗೆಹರಿಸಲು ಸರಣಿ ಸಭೆಗಳನ್ನೂ ನಡೆಸುತ್ತಿದ್ದಾರೆ. ಇದರಿಂದ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವರ್ತಕರು ವಿಶ್ಲೇಷಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 254 ಅಂಶ ಏರಿಕೆ ಕಂಡು 37,581 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 77 ಅಂಶ ಹೆಚ್ಚಾಗಿ 11,109 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗಳಿಕೆ: ಮಾರುತಿ, ಬಜಾಜ್‌ ಫೈನಾನ್ಸ್‌, ವೇದಾಂತ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಯುಎಲ್‌, ಕೋಟಕ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ ಶೇ 3.36ರವರೆಗೂ ಏರಿಕೆ ಕಂಡು ಕೊಂಡಿವೆ.

ಇಳಿಕೆ: ಯೆಸ್‌ ಬ್ಯಾಂಕ್‌ ಶೇ 7.91ರಷ್ಟು ಗರಿಷ್ಠ ಇಳಿಕೆ ಕಂಡಿದೆ. ಟೆಕ್‌ ಮಹೀಂದ್ರಾ, ಟಾಟಾ ಮೋಟರ್ಸ್‌, ಟಾಟಾ ಸ್ಟೀಲ್‌, ಐಟಿಸಿ ಮತ್ತು ಸನ್‌ ಫಾರ್ಮಾ ಶೇ 2.50ರವರೆಗೂ ಇಳಿಕೆ ಕಂಡಿವೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 9 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ
₹ 70.78ರಂತೆ ವಿನಿಮಯಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದಿನದ ವಹಿವಾಟಿನಲ್ಲಿ ₹ 203 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಸಂಪತ್ತು ₹ 2.86 ಲಕ್ಷ ಕೋಟಿ ಹೆಚ್ಚಳ

ಷೇರುಪೇಟೆಯಲ್ಲಿ ನಡೆಯುತ್ತಿರುವ ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ಏರಿಕೆ ಕಂಡುಬರುತ್ತಿದೆ.

ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 2.86 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 141.68 ಲಕ್ಷ ಕೋಟಿಗೆ ತಲುಪಿದೆ.

ತೈಲ ಬೇಡಿಕೆ 2008ರ ಕನಿಷ್ಠ

ಲಂಡನ್‌ (ರಾಯಿಟರ್ಸ್‌): ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಮತ್ತು ಅಮೆರಿಕ–ಚೀನಾ ವಾಣಿಜ್ಯ ಸಮರದಿಂದಾಗಿ ತೈಲ ಬೇಡಿಕೆಯು 2008ರ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತಿಳಿಸಿದೆ.

2019 ಮತ್ತು 2020ಕ್ಕೆ ತೈಲ ಬೇಡಿಕೆಯನ್ನು ತಗ್ಗಿಸಿದೆ. 2019ರಲ್ಲಿ ಒಂದು ‌ದಿನಕ್ಕೆ 10 ಲಕ್ಷ ಬ್ಯಾರೆಲ್‌ಗಳಷ್ಟು ತಗ್ಗಿಸಿದ್ದು, 11 ಲಕ್ಷ ಬ್ಯಾರೆಲ್‌ಗಳಷ್ಟಿರಲಿದೆ. 2020ರಲ್ಲಿ 50 ಸಾವಿರ ಬ್ಯಾರೆಲ್‌ಗಳಷ್ಟು ಕಡಿಮೆಯಾಗಲಿದ್ದು, 13 ಲಕ್ಷ ಬ್ಯಾರೆಲ್‌ಗಳಷ್ಟು ಇರಲಿದೆ ಎಂದು ಅಂದಾಜು ಮಾಡಿದೆ.

ಪೆಟ್ರೋಲಿಯಂ ರಫ್ತು ರಾಷ್ಟ್ರಗಳು (ಒಪೆಕ್‌) ಉತ್ಪಾದನೆಯನ್ನು ತಗ್ಗಿಸಿವೆ. ಇದರಿಂದಾಗಿ ಅಲ್ಪಾವಧಿಯಲ್ಲಿ ಮಾರುಕಟ್ಟೆಯಲ್ಲಿ ಸಮತೋಲನ ಮೂಡಿದೆ ಎಂದು ತಿಳಿಸಿದೆ.

Post Comments (+)