ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಹಾಗೂ ಅಮೆರಿಕದ ಆರ್ಥಿಕ ಹಿಂಜರಿತ ಭಾರತದ ಷೇರುಪೇಟೆಯ ಮೇಲೂ ಪರಿಣಾಮ ಬೀರಿದ್ದು, ಸೋಮವಾರ ಆರಂಭಿಕ ವಹಿವಾಟಿನಲ್ಲಿ ದೇಶಿಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ಕಂಡಿವೆ.
ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 2,401.49 ಅಂಶ ಇಳಿಕೆಯಾಗಿ 78,580.46ರಲ್ಲಿ ವಹಿವಾಟು ಆರಂಭಿಸಿದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 489.65 ಅಂಶ ಕುಸಿದು 24,228.05ರಲ್ಲಿ ವಹಿವಾಟು ನಡೆಸಿದೆ.
ಸೆನ್ಸೆಕ್ಸ್‌ನಲ್ಲಿ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಅದಾನಿ ಪೋರ್ಟ್ಸ್, ಮಾರುತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ನಷ್ಟ ಅನುಭವಿಸಿವೆ.
ಸನ್ ಫಾರ್ಮಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಸಕಾರಾತ್ಮಕ ವಹಿವಾಟು ನಡೆಸಿವೆ.
‘ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ತೆಲೆದೋರಿದ್ದು, ನಿರುದ್ಯೋಗದ ಪ್ರಮಾಣವೂ ಹೆಚ್ಚಿದೆ. ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಬಿಕ್ಕಟ್ಟು ಕೂಡ ದೇಶದ ಷೇರುಪೇಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ’ ಜಿಯೋಜಿತ್ ಫೈನ್ಯಾನ್ಸ್ ಸರ್ವೀಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ.ವಿಜಯ್‌ಕುಮಾರ್ ತಿಳಿಸಿದರು.
ಏಷ್ಯಾ ಮಾರುಕಟ್ಟೆಯಲ್ಲಿ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ನಷ್ಟ ಅನುಭವಿಸಿದರೆ, ಶಾಂಘೈ ಷೇರು ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿದೆ.