ಶುಕ್ರವಾರ, ಮೇ 27, 2022
31 °C
ಸೆನ್ಸೆಕ್ಸ್‌ 433 ಅಂಶ ಇಳಿಕೆ

ದೇಶದ ಷೇರುಪೇಟೆಗಳ ವಹಿವಾಟು: ಸತತ 3ನೇ ದಿನವೂ ನಕಾರಾತ್ಮಕವಾಗಿ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳ ವಹಿವಾಟು ಸತತ ಮೂರನೇ ದಿನವೂ ನಕಾರಾತ್ಮಕವಾಗಿ ಅಂತ್ಯಕಂಡಿತು. ಬ್ಯಾಂಕಿಂಗ್‌, ಹಣಕಾಸು ಮತ್ತು ಮೂಲಸೌಕರ್ಯ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್‌) 433 ಅಂಶ ಇಳಿಕೆ ಕಂಡು 59,919 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 144 ಅಂಶ ಇಳಿಕೆಯಾಗಿ 17,873ಕ್ಕೆ ತಲುಪಿತು.

ಅಮೆರಿಕದ ಹಣದುಬ್ಬರದ ಅಂಕಿ–ಅಂಶವನ್ನೂ ಒಳಗೊಂಡು ಜಾಗತಿಕ ಹಣದುಬ್ಬರದ ಒತ್ತಡವು ದೇಶಿ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಾಣುವಂತೆ ಮಾಡಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ. ಅಮೆರಿಕದ ಹಣದುಬ್ಬರವು ಶೇ 6.2ಕ್ಕೆ ತಲುಪಿದ್ದು, 30 ವರ್ಷಗಳ ಗರಿಷ್ಠ ಮಟ್ಟ ಇದು. ಹೀಗಾಗಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ನಿರೀಕ್ಷೆಗಿಂತಲೂ ಮೊದಲೇ ಬಡ್ಡಿದರ ಹೆಚ್ಚಿಸುವ ಆತಂಕ ಎದುರಾಗಿದೆ. ಅಲ್ಲದೆ, ಅಮೆರಿಕದ ಬಾಂಡ್‌ ಗಳಿಕೆಯು ಸಹ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ.

ಸೆನ್ಸೆಕ್ಸ್‌ನಲ್ಲಿ ಎಸ್‌ಬಿಐ ಷೇರು ಮೌಲ್ಯವು ಶೇ 2.83ರಷ್ಟು ಗರಿಷ್ಠ ಇಳಿಕೆ ಕಂಡಿತು. ಐಸಿಐಸಿಐ ಬ್ಯಾಂಕ್‌ ಷೇರು ಮೌಲ್ಯ ಶೇ 1.09ರಷ್ಟು, ಹೌಸಿಂಗ್‌ ಫೈನಾನ್ಸ್‌ ಬಜಾಜ್‌ ಫಿನ್‌ಸರ್ವ್‌ ಮತ್ತು ಬಜಾಜ್‌ ಫೈನಾನ್ಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌ ಮತ್ತು ಎಕ್ಸಿಸ್‌ ಬ್ಯಾಂಕ್ ಷೇರುಗಳ ಬೆಲೆಯಲ್ಲಿಯೂ ಇಳಿಕೆ ಆಗಿದೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.64ರವರೆಗೂ ಇಳಿಕೆ ಆಗಿವೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 18 ಪೈಸೆಗಳಷ್ಟು ಇಳಿಕೆ ಆಗಿದ್ದು, ಒಂದು ಡಾಲರ್‌ಗೆ ₹ 74.52ರಂತೆ ವಿನಿಮಯಗೊಂಡಿತು. ಷೇರುಪೇಟೆಯಲ್ಲಿನ ಅತಿಯಾದ ಮಾರಾಟದ ಒತ್ತಡ ಹಾಗೂ ಅಮೆರಿಕದ ಡಾಲರ್‌ ಮೌಲ್ಯ ವೃದ್ಧಿಯ ಕಾರಣಗಳಿಂದಾಗಿ ರೂಪಾಯಿ ಮೌಲ್ಯ ಇಳಿಕೆ ಕಾಣುವಂತಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು