ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆನ್ಸೆಕ್ಸ್‌ 676 ಅಂಶ ಏರಿಕೆ

Published 16 ಮೇ 2024, 15:47 IST
Last Updated 16 ಮೇ 2024, 15:47 IST
ಅಕ್ಷರ ಗಾತ್ರ

ಮುಂಬೈ : ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌ ಷೇರುಗಳ ಖರೀದಿ ಹಾಗೂ  ಏಷ್ಯಾದ ಮಾರುಕಟ್ಟೆಗಳಲ್ಲಿ ನಡೆದ ಉತ್ತಮ ವಹಿವಾಟಿನಿಂದಾಗಿ ಗುರುವಾರ ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 676 ಅಂಶ ಏರಿಕೆ ಕಂಡು (ಶೇ 0.93ರಷ್ಟು) 73,663 ಅಂಶಗಳಿಗೆ ತಲುಪಿದೆ. ದಿನದ ವಹಿವಾಟಿನ ಒಂದು ಸಂದರ್ಭದಲ್ಲಿ 73,749 ಅಂಶಗಳಿಗೆ ಮುಟ್ಟಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 203 ಅಂಶ ಹೆಚ್ಚಳವಾಗಿ, 22,403 ಅಂಶಗಳಲ್ಲಿ ಸ್ಥಿರವಾಯಿತು.

‘ಏಪ್ರಿಲ್‌ನಲ್ಲಿ ಅಮೆರಿಕದ ಹಣದುಬ್ಬರವು ನಿರೀಕ್ಷೆಯಂತೆ ಕಡಿಮೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ ಎರಡು ಬಾರಿ ಬಡ್ಡಿದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆಯು ಹೂಡಿಕೆದಾರರಲ್ಲಿದೆ. ಹಾಗಾಗಿ, ದೇಶೀಯ ಸೂಚ್ಯಂಕಗಳು ಏರಿಕೆ ಕಂಡಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಮಹೀಂದ್ರ ಆ್ಯಂಡ್‌ ಮಹೀಂದ್ರ, ಭಾರ್ತಿ ಏರ್‌ಟೆಲ್‌, ಟೆಕ್‌ ಮಹೀಂದ್ರ, ಟೈಟನ್‌, ಇನ್ಫೊಸಿಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಬಜಾಜ್‌ ಫಿನ್‌ಸರ್ವ್‌ ಎಚ್‌ಡಿಎಫ್‌ಸಿ ಬ್ಯಾಂಕ್‌, ಎಲ್‌ ಆ್ಯಂಡ್‌ ಟಿ, ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ.

ಮಾರುತಿ ಸುಜುಕಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪವರ್‌ ಗ್ರಿಡ್‌, ಟಾಟಾ ಮೋಟರ್‌, ಇಂಡಸ್‌ಇಂಡ್‌ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಬಿಎಸ್‌ಒ ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 1.07ರಷ್ಟು ಹಾಗೂ ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 0.85ರಷ್ಟು ಏರಿಕೆಯಾಗಿದೆ. 

ಬಂಡವಾಳ ಸರಕು ಸೂಚ್ಯಂಕ (ಶೇ 2.05), ಕೈಗಾರಿಕೆ (ಶೇ 1.99), ಟೆಕ್‌ (ಶೇ 1.66), ರಿಯಾಲ್ಟಿ (ಶೇ 1.59), ಮಾಹಿತಿ ತಂತ್ರಜ್ಞಾನ (ಶೇ 1.55), ಟೆಲಿಕಮ್ಯೂನಿಕೇಷನ್‌ (ಶೇ 0.99) ಹಾಗೂ ಹೆಲ್ತ್‌ಕೇರ್ ಸೂಚ್ಯಂಕ (ಶೇ 0.70) ಏರಿಕೆಯಾಗಿದೆ. ಯುಟಿಲಿಟಿ ಸೂಚ್ಯಂಕ ಇಳಿಕೆಯಾಗಿದೆ.

ಸೋಲ್‌, ಟೋಕಿಯೊ, ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದರೆ, ಯುರೋಪ್‌ ಮಾರುಕಟ್ಟೆಗಳು ಇಳಿಕೆ ದಾಖಲಿಸಿವೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯಲ್ಲಿ ಶೇ 0.33ರಷ್ಟು ಕುಸಿತವಾಗಿದ್ದು, ಪ್ರತಿ ಬ್ಯಾರೆಲ್‌ ದರವು 82.45 ಡಾಲರ್‌ ಆಗಿದೆ. ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ₹2,832 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಮಹೀಂದ್ರ ಷೇರಿನ ಮೌಲ್ಯ ಶೇ 4ರಷ್ಟು ಏರಿಕೆ

ಮಾರ್ಚ್‌ ತ್ರೈಮಾಸಿಕದಲ್ಲಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ನಿವ್ವಳ ಲಾಭದಲ್ಲಿ ಏರಿಕೆ ಆಗಿರುವುದರಿಂದ ಕಂಪನಿಯ ಷೇರಿನ ಮೌಲ್ಯದಲ್ಲಿ ಶೇ 4ರಷ್ಟು ಏರಿಕೆಯಾಗಿದೆ.  ಬಿಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 3.05ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹2372.85ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 3.97ರಷ್ಟು ಹೆಚ್ಚಳವಾಗಿದ್ದು ಪ್ರತಿ ಷೇರಿನ ಬೆಲೆ ₹2393.90 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹8742 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್‌ ₹2.95 ಲಕ್ಷ ಕೋಟಿಗೆ ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT