ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರು

ಸೆನ್ಸೆಕ್ಸ್ 901 ಅಂಶ ಕುಸಿತ; 64 ಸಾವಿರದಿಂದ ಕೆಳಕ್ಕೆ
Published 26 ಅಕ್ಟೋಬರ್ 2023, 15:37 IST
Last Updated 26 ಅಕ್ಟೋಬರ್ 2023, 15:37 IST
ಅಕ್ಷರ ಗಾತ್ರ

ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಎದುರಾಗಿರುವ ಉದ್ವಿಗ್ನ ಪರಿಸ್ಥಿತಿಯು ದೇಶದ ಷೇರುಪೇಟೆಗಳಲ್ಲಿ ಗುರುವಾರ ಕರಡಿ ಕುಣಿತ ಜೋರಾಗಲು ಕಾರಣವಾಯಿತು. ಸತತ ಆರನೇ ದಿನವೂ ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಂಡಿತು.

ಇಸ್ರೇಲ್‌–ಹಮಾಸ್ ಸಮರವು ದಿನೇ ದಿನೇ ತೀವ್ರಗೊಳ್ಳುತ್ತಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಗಳು ಮಾರಾಟದ ಒತ್ತಡಕ್ಕೆ ಒಳಗಾಗಿ ಕುಸಿಯುತ್ತಿವೆ. ಪರಿಣಾಮವಾಗಿ ಭಾರತದ ಷೇರುಪೇಟೆಗಳಲ್ಲಿಯೂ ಸೂಚ್ಯಂಕಗಳು ಇಳಿಕೆ ಕಾಣುತ್ತಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ವಹಿವಾಟಿನಲ್ಲಿ 901 ಅಂಶ ಕುಸಿತ ಕಂಡು, 64 ಸಾವಿರದ ಮಟ್ಟಕ್ಕಿಂತಲೂ ಕೆಳಗಿಳಿಯಿತು. 63,148 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 265 ಅಂಶ ಇಳಿಕೆಯಾಗಿ 18,857 ಅಂಶಗಳಿಗೆ ತಲುಪಿತು.

ವಾಹನ, ಹಣಕಾಸು ಮತ್ತು ಇಂಧನ ವಲಯದ ಷೇರುಗಳು ನಷ್ಟ ಕಂಡಿದ್ದು, ವಿದೇಶಿ ಬಂಡವಾಳ ಹೊರಹರಿವು ಮುಂದುವರಿಕೆಯೂ ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯ ಇಳಿಮುಖ ವಹಿವಾಟಿನ ಜೊತೆಗೆ ಅಕ್ಟೋಬರ್‌ ತಿಂಗಳ ವಾಯಿದಾ ವಹಿವಾಟು ಮುಕ್ತಾಯ ಆಗಲಿರುವುದು ಬ್ಯಾಂಕಿಂಗ್‌, ಆಟೊಮೊಬೈಲ್ ಮತ್ತು ಐ.ಟಿ. ಷೇರುಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಸಿತು. ಇದರಿಂದಾಗಿ ನಿಫ್ಟಿಯನ್ನು 19 ಸಾವಿರಕ್ಕಿಂತ ಕೆಳಕ್ಕೆ ಇಳಿಯುವಂತೆ ಆಯಿತು ಎಂದು ಕೋಟಕ್ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿಯ ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.

ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಅಮೆರಿಕದ ಬಾಂಡ್ ಗಳಿಕೆ ಪ್ರಮಾಣ ಹೆಚ್ಚಾಗುತ್ತಿರುವ ಕಾರಣಗಳಿಂದಾಗಿ ಮಾರುಕಟ್ಟೆಗಳಲ್ಲಿ ಸೂಚ್ಯಂಕ ಕುಸಿತ ಕಾಣುತ್ತಿದೆ ಎಂದು ಎಕ್ಸಿಸ್‌ ಸೆಕ್ಯುರಿಟೀಸ್‌ ಪಿಎಂಎಸ್‌ನ ಮುಖ್ಯ ಹೂಡಿಕೆ ಅಧಿಕಾರಿ ನವೀನ್‌ ಕುಲಕರ್ಣಿ ತಿಳಿಸಿದ್ದಾರೆ.

ಬಿಎಸ್‌ಇ ಮಿಡ್‌ಕ್ಯಾಪ್ ಶೇ 1.06 ಮತ್ತು ಸ್ಮಾಲ್‌ಕ್ಯಾಪ್‌ ಶೇ 0.32ರಷ್ಟು ಇಳಿಕೆ ಕಂಡಿತು. ಬ್ರೆಂಟ್ ಕಚ್ಚಾ ತೈಲ ದರ ಶೇ 0.65ರಷ್ಟು ಇಳಿಕೆ ಕಂಡು ಬ್ಯಾರಲ್‌ಗೆ 89.54 ಡಾಲರ್‌ಗೆ ತಲುಪಿತು.

6 ದಿನದಲ್ಲಿ ₹17.77 ಲಕ್ಷ ಕೋಟಿ ನಷ್ಟ

ಸತತ ಆರು ದಿನಗಳಲ್ಲಿ ನಡೆದ ನಕಾರಾತ್ಮಕ ವಹಿವಾಟಿನ ಪರಿಣಾಮವಾಗಿ ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹17.77 ಲಕ್ಷ ಕೋಟಿಯಷ್ಟು ಕರಗಿದೆ. ಗುರುವಾರ ಒಂದೇ ದಿನ ₹3.17 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಮುಂಬೈ ಷೇರುಪೇಟೆಯ ಮಾರುಕಟ್ಟೆ ಬಂಡವಾಳ ಮೌಲ್ಯವು ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ₹306 ಲಕ್ಷ ಕೋಟಿಗೆ ಇಳಿಕೆ ಕಂಡಿತು. ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಮತ್ತು ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇರುವ ಕಾರಣಗಳು ಸಹ ಹೂಡಿಕೆದಾರರನ್ನು ಷೇರುಪೇಟೆಗಳಿಂದ ದೂರ ಉಳಿಯುವಂತೆ ಮಾಡುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT