ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಕಾರ್ನ್‌: ಹೂಡಿಕೆಯಲ್ಲಿ ಸಿಕೋಯಾ ಮುಂದು

Last Updated 26 ಆಗಸ್ಟ್ 2020, 11:38 IST
ಅಕ್ಷರ ಗಾತ್ರ

ಮುಂಬೈ: ಭಾರತದ ಯೂನಿಕಾರ್ನ್‌ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಕಂಪನಿಗಳ ಸಾಲಿನಲ್ಲಿ ‘ಸಿಕೋಯಾ ಕ್ಯಾಪಿಟಲ್‌ ಇಂಡಿಯಾ’ ಮೊದಲ ಸ್ಥಾನದಲ್ಲಿದೆ. ₹ 7,400 ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯದ ನವೋದ್ಯಮಗಳನ್ನು ಯೂನಿಕಾರ್ನ್‌ಗಳು ಎನ್ನಲಾಗುತ್ತದೆ. ‘ಸಿಕೋಯಾ ಕ್ಯಾಪಿಟಲ್‌’ ಅಮೆರಿಕದ ಕಂಪನಿ.

ಬೈಜುಸ್, ಅನ್‌ಅಕಾಡೆಮಿ ಸೇರಿದಂತೆ ಒಟ್ಟು ಎಂಟು ಯೂನಿಕಾರ್ನ್‌ಗಳಲ್ಲಿ ಸಿಕೋಯಾ ಹೂಡಿಕೆ ಮಾಡಿದೆ. ಸಿಕೋಯಾದ ನಂತರದ ಸ್ಥಾನಗಳಲ್ಲಿ ಜಪಾನಿನ ಹೂಡಿಕೆದಾರ ಸಾಫ್ಟ್‌ಬ್ಯಾಂಕ್‌ ಮತ್ತು ಬ್ರಿಟನ್ನಿನ ಸ್ಟಡ್‌ವ್ಯೂವ್‌ ಕ್ಯಾಪಿಟಲ್‌ ಇವೆ. ಇವೆರಡೂ ತಲಾ ಏಳು ಯೂನಿಕಾರ್ನ್‌ಗಳಲ್ಲಿ ಹೂಡಿಕೆ ಮಾಡಿವೆ ಎಂದು ಹರೂನ್‌ ಇಂಡಿಯಾ ಯೂನಿಕಾರ್ನ್‌ ಇನ್ವೆಸ್ಟರ್ಸ್‌ ಪಟ್ಟಿಯಲ್ಲಿ ತಿಳಿಸಲಾಗಿದೆ.

ಭಾರತದ ನವೋದ್ಯಮಗಳಲ್ಲಿ ಚೀನಾದ ಕಂಪನಿಗಳ ಹೂಡಿಕೆ ಹೆಚ್ಚಾಗಿದೆ ಎಂಬ ಕಳವಳ ಒಂದು ವಲಯದಲ್ಲಿ ವ್ಯಕ್ತವಾಗಿದ್ದರೂ, ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್‌ ಮಾತ್ರ ಭಾರತದ ಯೂನಿಕಾರ್ನ್‌ಗಳಲ್ಲಿನ ಮುಂಚೂಣಿ ಹೂಡಿಕೆ ಕಂಪನಿ ಎಂಬುದನ್ನು ಈ ಪಟ್ಟಿ ತಿಳಿಸಿದೆ. ಮೂರು ಯೂನಿಕಾರ್ನ್‌ಗಳಲ್ಲಿ ಟೆನ್ಸೆಂಟ್ ಹೋಲ್ಡಿಂಗ್ಸ್‌ನ ಹೂಡಿಕೆ ಇದ್ದು, ಇದು 11ನೆಯ ಸ್ಥಾನದಲ್ಲಿದೆ.

ಐಪಿಎಲ್‌ನ ಪ್ರಾಯೋಜಕತ್ವದ ಹಕ್ಕುಗಳನ್ನು ಗೆದ್ದುಕೊಂಡಿರುವ ಡ್ರೀಮ್‌11 ಕಂಪನಿಯಲ್ಲಿ ಟೆನ್ಸೆಂಟ್ ಹೋಲ್ಡಿಂಗ್ಸ್‌ನ ಹೂಡಿಕೆ ಇದೆ. ಚೀನಾದ ಇ–ಕಾಮರ್ಸ್‌ ಕ್ಷೇತ್ರದ ದೈತ್ಯ ಅಲಿಬಾಬಾ, ಭಾರತದ ಪೇಟಿಎಂ, ಪೇಟಿಎಂ ಮಾಲ್‌, ಜೊಮ್ಯಾಟೊ ಹಾಗೂ ಬಿಗ್‌ಬಾಸ್ಕೆಟ್‌ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಆದರೆ ಅದು ತನ್ನ ಹೂಡಿಕೆಗಳನ್ನು ಸಿಂಗಪುರದ ಕಚೇರಿಯ ಮೂಲಕ ಮಾಡಿರುವ ಕಾರಣ, ಹರೂನ್‌ ಈ ಹೂಡಿಕೆಗಳನ್ನು ‘ಚೀನಾದ ಕಂಪನಿಯ ಹೂಡಿಕೆಗಳು’ ಎಂದು ವರ್ಗೀಕರಿಸಿಲ್ಲ.

ರತನ್ ಟಾಟಾ ಅವರ ‘ಆರ್‌ಎನ್‌ಟಿ ಅಸೋಸಿಯೇಟ್ಸ್‌’ ಕಂಪನಿಯು ನಾಲ್ಕು ಯೂನಿಕಾರ್ನ್‌ಗಳಲ್ಲಿ ಹೂಡಿಕೆ ಮಾಡಿದೆ. ‘ಈ ಹೂಡಿಕೆದಾರರು ಭಾರತದಲ್ಲಿ ಹೊಸ ಸಂಪತ್ತಿನ ಸೃಷ್ಟಿಗೆ ವೇಗ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ’ ಎಂದು ಹರೂನ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಅನಸ್ ರೆಹ್ಮಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT