ಮಂಗಳವಾರ, ಸೆಪ್ಟೆಂಬರ್ 24, 2019
29 °C

ಕುಸಿದ ಸೇವಾ ವಲಯ: ಸಾಧಾರಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ, ಉತ್ಪಾದನಾ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಸೇವಾ ವಲಯದ ಬೆಳವಣಿಗೆಯೂ ಆಗಸ್ಟ್‌ ತಿಂಗಳಲ್ಲಿ ಕುಸಿತ ಕಂಡಿದೆ. 

ಹೊಸ ವಹಿವಾಟುಗಳಿಗೆ ನಿರೀಕ್ಷಿತ ಮಟ್ಟದ ಬೇಡಿಕೆ ಇಲ್ಲ. ಇದರ ಜತೆಗೆ ಉದ್ಯೋಗ ಸೃಷ್ಟಿ ಮತ್ತು ಉತ್ಪಾದನಾ ಚಟುವಟಿಕೆಯೂ ಮಂದಗತಿಯಲ್ಲಿದೆ. ಇದರಿಂದಾಗಿ ಸೇವಾ ವಲಯದ ಬೆಳವಣಿಗೆ ಕುಂಠಿತವಾಗಿದೆ.

ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸರ್ವಿಸಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಜುಲೈನಲ್ಲಿ 53.8ರಷ್ಟಿತ್ತು. ಆಗಸ್ಟ್‌ನಲ್ಲಿ ಅದು 52.4ಕ್ಕೆ ಇಳಿದಿದೆ. ಸೇವಾ ವಲಯದಲ್ಲಿನ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಪರ್ಚೆಜಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ), ಖಾಸಗಿ ವಲಯದ ಕಂಪನಿಗಳ ಹಣಕಾಸು ಪರಿಸ್ಥಿತಿ ಸೂಚಿಸುವ ಸಮೀಕ್ಷೆಯಾಗಿದೆ. ಮರ್ಕಿಟ್ ಗ್ರೂಪ್‌ ಸೇರಿದಂತೆ ಮೂರು ಕಂಪನಿಗಳು ಈ ಸಮೀಕ್ಷೆ ನಡೆಸುತ್ತವೆ. ಈ ಸೂಚ್ಯಂಕವು 50ಕ್ಕಿಂತ ಹೆಚ್ಚಿಗೆ ಇರುವುದು ಎಂದರೆ ಕಂಪನಿಯು ಪ್ರಗತಿಯ ಹಾದಿಯಲ್ಲಿ ಇದೆ ಎಂದರ್ಥ. 50ಕ್ಕಿಂತ ಕಡಿಮೆ ಇರುವುದು ಪ್ರಗತಿ ಹಿನ್ನಡೆಯ ಸೂಚಕವಾಗಿರುತ್ತದೆ.

‘ದೇಶದ ಸೇವಾ ವಲಯದಲ್ಲಿನ ಆಗಸ್ಟ್‌ ತಿಂಗಳ ಬೆಳವಣಿಗೆಯು ನಿಧಾನಗೊಂಡಿರುವುದು, ತಯಾರಿಕಾ ವಲಯದಲ್ಲಿನ ಪ್ರಗತಿ ಕುಂಠಿತಕ್ಕೆ ತಾಳೆಯಾಗುತ್ತಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಪ್ರಧಾನ ಅರ್ಥಶಾಸ್ತ್ರಜ್ಞೆ ಪಿ. ಡಿ ಲಿಮಾ ಹೇಳಿದ್ದಾರೆ.

ಮರ್ಕಿಟ್‌ ಇಂಡಿಯಾ ಸಿದ್ಧಪಡಿಸಿರುವ ತಯಾರಿಕೆ ಮತ್ತು ಸೇವಾ ವಲಯದ ಜಂಟಿ ಸಮೀಕ್ಷೆಯು ಜುಲೈ ತಿಂಗಳ 53.9ರಿಂದ ಆಗಸ್ಟ್‌ನಲ್ಲಿ 52.6ಕ್ಕೆ ಇಳಿದಿದೆ. ಇತ್ತೀಚಿನ ಬಹುತೇಕ ಸಮೀಕ್ಷೆಗಳು, ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳು ಕುಸಿತ ಕಂಡಿರುವುದನ್ನು ದಾಖಲಿಸಿವೆ.

ಚೇತರಿಕೆಯ ವಿಶ್ವಾಸ: ಮುಂದಿನ ಒಂದು ವರ್ಷದಲ್ಲಿ ವಹಿವಾಟು ಚೇತರಿಕೆ ಹಾದಿಗೆ ಮರಳುವ ಬಗ್ಗೆ ಸೇವೆಗಳನ್ನು ಒದಗಿಸುವ ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.

-ಸೇವಾ ವಲಯದಲ್ಲಿನ ಉತ್ಪಾದನೆಯು ನಿಧಾನ ಗತಿಯಲ್ಲಿ ಹೆಚ್ಚಳ

-ಉದ್ಯೋಗ ಸೃಷ್ಟಿ ಮತ್ತು ಉತ್ಪಾದನಾ ಹೆಚ್ಚಳ ಸಾಧಾರಣ ಮಟ್ಟದಲ್ಲಿ

-ಒಂದು ವರ್ಷದಲ್ಲಿ ಚೇತರಿಕೆ ಹಾದಿಗೆ; ಸೇವಾ ಸಂಸ್ಥೆಗಳ ವಿಶ್ವಾಸ

 

ಕೆ.ಜಿ ಬೆಳ್ಳಿಗೆ ₹ 50,600

ಬೆಂಗಳೂರು (ಪಿಟಿಐ): ದೇಶದಾದ್ಯಂತ ಬೆಳ್ಳಿ ಧಾರಣೆ ಬುಧವಾರ ಪ್ರತಿ ಕೆ.ಜಿಗೆ ₹ 50 ಸಾವಿರಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಯಿತು. ಬೆಂಗಳೂರಿನಲ್ಲಿ ಕೆ.ಜಿಗೆ ₹ 1,800ರಂತೆ ಹೆಚ್ಚಾಗಿ ₹ 50,600ಕ್ಕೆ ತಲುಪಿತು. ಮಂಗಳವಾರ ₹ 48,800 ಇತ್ತು.

ದೆಹಲಿಯಲ್ಲಿ ಬೆಳ್ಳಿ ಪ್ರತಿ ಕೆ.ಜಿಗೆ ₹ 2,070ರಂತೆ ಏರಿಕೆಯಾಗಿ ₹ 50,125ಕ್ಕೆ ತಲುಪಿದೆ. ಮುಂಬೈನಲ್ಲಿ ಬೆಳ್ಳಿ ದರ ಕೆ.ಜಿಗೆ ₹ 1,895ರಂತೆ ಹೆಚ್ಚಾಗಿ ₹ 49,950ರಂತೆ ಮಾರಾಟವಾಯಿತು.

2 ದಿನ ತಯಾರಿಕೆ ಸ್ಥಗಿತ

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಗುರುಗ್ರಾಮ ಮತ್ತು ಮನೇಸರ ಘಟಕಗಳಲ್ಲಿ ಇದೇ 7 ಮತ್ತು 9ರಂದು ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ವಾಹನ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬರುತ್ತಿರುವುದರಿಂದ  ಈ ನಿರ್ಧಾರ ಕೈಗೊಂಡಿದೆ. ಮೇ ತಿಂಗಳಿನಲ್ಲಿಯೂ ಒಂದು ದಿನದ ಮಟ್ಟಿಗೆ ಈ ಎರಡೂ ಘಟಕಗಳಲ್ಲಿ ತಯಾರಿಕೆ ನಿಲ್ಲಿಸಲಾಗಿತ್ತು.

Post Comments (+)