ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಲೈಸ್: ವಾರದಲ್ಲಿ ಮೂರೇ ದಿನ ಕೆಲಸ!

ಕೆಲಸದ ಹೊಸ ಸಂಸ್ಕೃತಿ ಭವಿಷ್ಯದ ಮಾದರಿ: ರಾಜನ್
Last Updated 6 ಅಕ್ಟೋಬರ್ 2021, 18:16 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ಪಾವತಿ ಹಾಗೂ ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಒದಗಿಸುತ್ತಿರುವ ಬೆಂಗಳೂರು ಮೂಲದ ಸ್ಲೈಸ್ ಕಂಪನಿಯು ಹೊಸ ಕೆಲಸದ ಸಂಸ್ಕೃತಿಯನ್ನು ರೂಪಿಸಿದೆ. ವಾರದಲ್ಲಿ ಮೂರು ದಿನ ಮಾತ್ರ ಕೆಲಸ, ಇನ್ನುಳಿದ ನಾಲ್ಕು ದಿನ ನೌಕರರಿಗೆ ತಮ್ಮ ಆಸಕ್ತಿಗಳನ್ನು ಪೋಷಿಸಿಕೊಳ್ಳಲು ಮೀಸಲು ಎಂದು ಕಂಪನಿ ಹೇಳಿದೆ.

ವಾರದಲ್ಲಿ ಮೂರು ದಿನ ಮಾತ್ರ ಕೆಲಸ ಮಾಡಿದರೆ ಸಾಕು ಎಂಬ ವಿಚಾರವನ್ನು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜನ್ ಬಜಾಜ್ ಅವರು ಟ್ವೀಟ್ ಮಾಡಿ ಹೇಳಿದ್ದಾರೆ. ‘ಹಲವರು ಒಂದು ಕಡೆ ಸ್ಥಿರವಾಗಿ ನಿಂತು ಕೆಲಸ ಮಾಡುತ್ತಲೇ, ಪರ್ಯಾಯವಾಗಿ ಇತರ ಕೆಲವು ಕೆಲಸಗಳನ್ನು ಮಾಡಲು ಕೂಡ ಬಯಸುತ್ತಾರೆ. ಅಂಥವರಿಗಾಗಿ ಈ ಬಗೆಯ ಕೆಲಸದ ಮಾದರಿ’ ಎಂದು ಬಜಾಜ್ ಅವರು ಹೇಳಿದ್ದಾರೆ.

ಕೆಲಸದ ಹೊಸ ಸಂಸ್ಕೃತಿ ವಿಚಾರವಾಗಿ ಅವರು ಬಹಳ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಇದು ಭವಿಷ್ಯದ ಮಾದರಿ ಎಂದೂ ಹೇಳಿದ್ದಾರೆ. ನೌಕರರು ಕೆಲಸವನ್ನು ಕಚೇರಿಗೇ ಬಂದು ಮಾಡಬೇಕು ಎಂಬ ನಿಯಮವಿಲ್ಲ; ಎಲ್ಲಿಂದಲಾದರೂ ಅವರು ಕೆಲಸ ಮಾಡಬಹುದು.

‘ಕಂಪನಿಗಳು ಪ್ರತಿಭಾನ್ವಿತರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಹಲವು ಕೊಡುಗೆಗಳನ್ನು ನೀಡುತ್ತವೆ. ನಾವು, ಅವರಿಗೆ ಬಹಳ ಮುಖ್ಯವಾದ ‘ಸಮಯ’ವನ್ನು ಕೊಡಲು ಬಯಸಿದೆವು. ಕೆಲಸದ ಹೊರತಾಗಿ ತಮ್ಮ ಆಸಕ್ತಿಯ ಯೋಜನೆಗಳ ಮೇಲೆ ಕೆಲಸ ಮಾಡಲು ಬಯಸುವವರಿಗೆ ಸಮಯ ಕೊಡುವ ಆಲೋಚನೆ ನಮ್ಮದು. ಹಲವು ಸುತ್ತುಗಳ ಚರ್ಚೆ ನಡೆಸಿದ ನಂತರ ನಾವು ಈ ಯೋಜನೆ ರೂಪಿಸಿದ್ದೇವೆ’ ಎಂದು ರಾಜನ್ ಬಜಾಜ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಕಂಪನಿಯು ಮುಂದಿನ ಒಂದು ವರ್ಷದಲ್ಲಿ ಒಟ್ಟು ನೂರು ಜನರನ್ನು ನೇಮಕ ಮಾಡಿಕೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟು ಒಂದು ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದೆ. ವಾರದಲ್ಲಿ ಮೂರು ದಿನ ಮಾತ್ರ ಕೆಲಸ ಎನ್ನುವ ವ್ಯವಸ್ಥೆಯನ್ನು ಹಲವು ದೊಡ್ಡ ಕಂಪನಿಗಳೂ ಒದಗಿಸಲಾರವು ಎಂದು ಸ್ಲೈಸ್ ಹೇಳಿಕೊಂಡಿದೆ. ವಾರದಲ್ಲಿ ಐದು ದಿನ ಕೆಲಸ ಮಾಡುವ ವ್ಯವಸ್ಥೆ ಕೂಡ ಕಂಪನಿಯಲ್ಲಿ ಮುಂದುವರಿಯಲಿದೆ.

ವಾರದಲ್ಲಿ ಮೂರು ದಿನ ಮಾತ್ರ ಕೆಲಸ ಮಾಡುವವರು, ಒಂದು ವಾರದಲ್ಲಿ ಒಟ್ಟು 20ರಿಂದ 25 ತಾಸು ಕೆಲಸ ಮಾಡಬೇಕಾಗುತ್ತದೆ. ಇವರಿಗೆ ಸಿಗುವ ಭತ್ಯೆಗಳಲ್ಲಿ ಕಡಿತ ಇರುವುದಿಲ್ಲ ಎಂದು ಕಂಪನಿ ಹೇಳಿದೆ. ಕಂಪನಿಯಲ್ಲಿ ಈಗ 450 ಜನ ಕೆಲಸ ಮಾಡುತ್ತಿದ್ದಾರೆ. ತಾನು ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುತ್ತಿರುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT