ಮಂಗಳವಾರ, ಜುಲೈ 14, 2020
28 °C
ಇಂಡಿಯಾ ರೇಟಿಂಗ್ಸ್‌ ಅಂದಾಜು

ರಾಜ್ಯದ ಜಿಡಿಪಿ ಶೇ 6.4ರಷ್ಟು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) ಶೇ 1.4 ರಿಂದ ಶೇ 14.3ರವರೆಗೆ ಕುಸಿತ ಕಾಣಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್‌ ವರದಿಯಲ್ಲಿ ಅಂದಾಜಿಸಲಾಗಿದೆ.

ಆರ್ಥಿಕ ಚಟುವಟಿಕೆಗಳ ಮೇಲೆ ಕೋವಿಡ್‌ ಪಿಡುಗು ಬೀರಿರುವ ವ್ಯತಿರಿಕ್ತ ಪರಿಣಾಮಗಳಿಂದ ರಾಜ್ಯಗಳ ಆರ್ಥಿಕ ವೃದ್ಧಿ ದರವು  ಕುಸಿತಕ್ಕೆ ಒಳಗಾಗಲಿದೆ. ಕರ್ನಾಟಕದ ವೃದ್ಧಿ ದರ ಶೇ  6.4ರಷ್ಟು ಕುಸಿತ ಕಾಣಲಿದೆ. ಲಾಕ್‌ಡೌನ್‌ನಿಂದ ಹೆಚ್ಚು ಬಾಧಿತಗೊಂಡಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ. ಜಾರ್ಖಂಡ್‌, ತಮಿಳುನಾಡು, ಕೇರಳ ಮತ್ತು ಒಡಿಶಾ ನಂತರದ ಸ್ಥಾನದಲ್ಲಿ ಇವೆ.

ಮಧ್ಯಪ್ರದೇಶ, ಪಂಜಾಬ್‌, ಬಿಹಾರ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಲಾಕ್‌ಡೌನ್‌ನಿಂದಾದ ನಷ್ಟ ಕಡಿಮೆ ಪ್ರಮಾಣದಲ್ಲಿ ಇದೆ.

ವಿಭಿನ್ನ ಪರಿಣಾಮ: ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳ ಮೇಲಿನ ಲಾಕ್‌ಡೌನ್‌ ಪರಿಣಾಮ ಭಿನ್ನವಾಗಿರಲಿದೆ. ಕೃಷಿ ಚಟುವಟಿಕೆಗಳು ಹೆಚ್ಚು ಬಾಧಿತಗೊಂಡಿಲ್ಲ. ಕೃಷಿ ಚಟುವಟಿಕೆ ಹೆಚ್ಚಿಗೆ ಇರುವ ರಾಜ್ಯಗಳು, ಕೃಷಿ ಚಟುವಟಿಕೆ ಕಡಿಮೆ ಇರುವ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ನಷ್ಟಕ್ಕೆ ಗುರಿಯಾಗಲಿವೆ.

ಡಿಜಿಟಲ್‌ ವಹಿವಾಟಿನ ಕಾರಣಕ್ಕೆ ಸೇವಾ ಕ್ಷೇತ್ರದ ಉಪ ವಲಯಗಳಾದ ಐ.ಟಿ, ಐ.ಟಿ ಆಧಾರಿತ ಸೇವೆ, ಬ್ಯಾಂಕ್‌ ಮತ್ತು ಹಣಕಾಸು ಸೇವೆಗಳು ಕಡಿಮೆ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ವರಮಾನದಲ್ಲಿ ಐ. ಟಿ ಸೇವೆಗಳ ಪಾಲು ಹೆಚ್ಚಿಗೆ ಇರುವ ರಾಜ್ಯಗಳು ಕಡಿಮೆ ಸಂಕಷ್ಟಕ್ಕೆ ಗುರಿಯಾಗಿವೆ.

ಸ್ವಂತ ತೆರಿಗೆ ವರಮಾನದ ಕೊಡುಗೆ: ಲಾಕ್‌ಡೌನ್‌ ಕಾರಣಕ್ಕೆ ಎಲ್ಲ ರಾಜ್ಯಗಳ ವರಮಾನ ಸಂಗ್ರಹವು ಕುಸಿತಗೊಂಡಿದೆ. ರಾಜ್ಯಗಳ ಒಟ್ಟಾರೆ ವರಮಾನದಲ್ಲಿ ಸ್ವಂತ ತೆರಿಗೆ ವರಮಾನವು (ಎಸ್‌ಒಟಿಆರ್‌) ಹೆಚ್ಚಿಗೆ ಇದ್ದರೆ ಅವುಗಳು ಹೆಚ್ಚು ಬಾಧಿತವಾಗಿರಲಿವೆ. ಈ ವಿಷಯದಲ್ಲಿ ಮಹಾರಾಷ್ಟ್ರ, ಗುಜರಾತ್‌, ತಮಿಳನಾಡು, ಕೇರಳ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳು ಹೆಚ್ಚು ನಷ್ಟ ಕಾಣಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು